image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾರ್ಮಿಕ ಇಲಾಖೆಯಲ್ಲಿ ₹800 ಕೋಟಿ ಹಗರಣ: ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ

ಕಾರ್ಮಿಕ ಇಲಾಖೆಯಲ್ಲಿ ₹800 ಕೋಟಿ ಹಗರಣ: ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ

ಶಿವಮೊಗ್ಗ: ರಾಜ್ಯದ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ₹800 ಕೋಟಿ ಬೃಹತ್ ಹಗರಣ ನಡೆದಿದೆ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮದ ಕುರಿತು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ (ಇಡಿ) ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಪ್ರಸ್ತುತ 27 ಲಕ್ಷಕ್ಕೂ ಅಧಿಕ (27,13,000) ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು, ಒಬ್ಬ ಕಾರ್ಮಿಕನ ಆರೋಗ್ಯ ತಪಾಸಣೆಗೆ ಸರ್ಕಾರ ₹2,950 ವೆಚ್ಚ ನಿಗದಿಪಡಿಸಿ ಗುತ್ತಿಗೆ ನೀಡಿತ್ತು. ಆದರೆ, ವಾಸ್ತವದಲ್ಲಿ ಯಾವುದೇ ತಪಾಸಣೆಯನ್ನು ನಡೆಸದೆಯೇ ಕಳೆದ ಮೂರು ವರ್ಷಗಳಲ್ಲಿ ಸುಮಾರು ₹800 ಕೋಟಿ ಹಣವನ್ನು ಇಲಾಖೆಯಿಂದ ಬಿಡುಗಡೆಗೊಳಿಸಿ ಲೂಟಿ ಮಾಡಲಾಗಿದೆ ಎಂದು ಅವರು ದೂರಿದರು. ಬಡ ಮತ್ತು ಅಮಾಯಕ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ದಂಧೆ ನಡೆಸಿ ವಂಚಿಸಲಾಗಿದೆ ಎಂದು ಅವರು ಕಿಡಿಕಾರಿದರು.

ಈ ಹಗರಣದ ಹಣದ ಚೆಕ್‌ಗಳು ಕೇರಳ ಹಾಗೂ ದೆಹಲಿಯ ಬ್ಯಾಂಕ್‌ಗಳಿಗೆ ತಲುಪಿದ್ದು, ಅಲ್ಲಿಂದ ಹಣವನ್ನು ಡ್ರಾ ಮಾಡಿ ಹಂಚಿಕೊಳ್ಳುವ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ಜ್ಞಾನೇಂದ್ರ ಆರೋಪಿಸಿದರು. ಈ ಅಕ್ರಮದ ಆಳ ಅಗಲ ದೊಡ್ಡದಾಗಿರುವುದರಿಂದ ತಕ್ಷಣವೇ ತನಿಖೆ ಆರಂಭಿಸಿ ಸಂಬಂಧಪಟ್ಟವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

Category
ಕರಾವಳಿ ತರಂಗಿಣಿ