image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಿಂಚಣಿ ಹಣ ಬಿಡುಗಡೆಗೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಸಿ.ಟಿ. ರವಿ ಎಚ್ಚರಿಕೆ

ಪಿಂಚಣಿ ಹಣ ಬಿಡುಗಡೆಗೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಸಿ.ಟಿ. ರವಿ ಎಚ್ಚರಿಕೆ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 6 ರಿಂದ 8 ತಿಂಗಳಿನಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ಪಿಂಚಣಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಶಾಸಕ ಡಾ. ಸಿ.ಟಿ. ರವಿ ಎಚ್ಚರಿಸಿದ್ದಾರೆ. ಈ ಸಮಸ್ಯೆಯನ್ನು ಖಂಡಿಸಿ ಚಿಕ್ಕಮಗಳೂರು ಗ್ರಾಮಾಂತರ ಮತ್ತು ನಗರ ಬಿಜೆಪಿ ಮಂಡಲದ ವತಿಯಿಂದ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ 67 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಿಂಚಣಿ ಸಿಗದೆ ತೀವ್ರ ಜೀವನಾಧಾರ ಸಂಕಷ್ಟ ಎದುರಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ. ರವಿ ಹೇಳಿದರು. ಗ್ರಾಮೀಣ ಭಾಗದ ವೃದ್ಧರು ಹಾಗೂ ವಿಧವೆಯರು ಪಿಂಚಣಿ ಸಿಗದೆ ಕಣ್ಣೀರಿಡುತ್ತಿದ್ದು, ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಾಕಿ ಹಣ ನೀಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜೆಗಳ ಸುಖವೇ ರಾಜನ ಸುಖ ಎಂಬ ಚಾಣಕ್ಯನ ಮಾತನ್ನು ಆಡಳಿತಗಾರರು ನೆನಪಿಸಿಕೊಳ್ಳಬೇಕು. ಜನರು ಪಿಂಚಣಿ, ಮನೆ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಕಣ್ಣೀರು ಹಾಕುತ್ತಿರುವಾಗ ಸರ್ಕಾರ ಉತ್ಸವ ಮತ್ತು ಸಂಭ್ರಮಾಚರಣೆಗಳಲ್ಲಿ ತೊಡಗಿರುವುದು ಸರಿಯಲ್ಲ. ಕಮಿಷನ್ ಪಡೆಯುವುದು ಮತ್ತು ಭ್ರಷ್ಟಾಚಾರ ಮಾಡುವುದು ಜನಪರ ಆಡಳಿತದ ಲಕ್ಷಣವಲ್ಲ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉಪ್ಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆ ಸೇರಿದಂತೆ ಜಿಲ್ಲೆಯ ಹಲವು ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೇ ನಿಂತಿದ್ದು, ಬಡವರು ಇಂದಿಗೂ ಸೂರು ಇಲ್ಲದೆ ಬೀದಿಯಲ್ಲೇ ವಾಸಿಸುವಂತಾಗಿದೆ. ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪಾವತಿಯಲ್ಲೂ ವಿಳಂಬವಾಗುತ್ತಿದೆ. ರಾಜ್ಯದ 23 ಲಕ್ಷ ಬಡ ಫಲಾನುಭವಿಗಳಿಗೆ ತಕ್ಷಣ ಪಿಂಚಣಿ ತಲುಪಿಸಬೇಕು. ಬಡವರ ಆಕ್ರೋಶ ಕಾಡ್ಗಿಚ್ಚಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಮುಖಂಡರಾದ ಕನಕರಾಜ್ ಅರಸ್, ಬಿ.ಜಿ. ಸೋಮಶೇಖರ್, ಹೆಚ್.ಸಿ. ಕಲ್ಮುರುಡಪ್ಪ, ರವೀಂದ್ರ ಬೆಳವಾಡಿ, ಕುರುವಂಗಿ ವೆಂಕಟೇಶ್, ಕೆ.ಎಸ್. ಪುಷ್ಪರಾಜ್, ಜಿ.ಎನ್. ವಿಜಯ್ ಕುಮಾರ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ