image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯದಲ್ಲಿ ಭೀಕರ ಬರ: ರೈತರಿಗೆ ಮೊದಲ ಕಂತಿನ ಪರಿಹಾರ ಘೋಷಿಸಿದ ಡಿಸಿಎಂ ಪರಮೇಶ್ವರ

ರಾಜ್ಯದಲ್ಲಿ ಭೀಕರ ಬರ: ರೈತರಿಗೆ ಮೊದಲ ಕಂತಿನ ಪರಿಹಾರ ಘೋಷಿಸಿದ ಡಿಸಿಎಂ ಪರಮೇಶ್ವರ

ಬಳ್ಳಾರಿ : ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು, ರಾಜ್ಯದಲ್ಲಿ ಶೇ.90ರಷ್ಟು ಬೆಳೆ ಹಾನಿಯಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದ 240 ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಗ್ರೌಂಡ್ ಟ್ರೂತಿಂಗ್ ನಡೆಯುತ್ತಿರುವ 23 ತಾಲೂಕುಗಳ ಪೈಕಿ 10ರಿಂದ 15 ತಾಲೂಕುಗಳು ಶೀಘ್ರದಲ್ಲೇ ಈ ಪಟ್ಟಿಗೆ ಸೇರಲಿವೆ. ಮಳೆಯಾಶ್ರಿತ ಹಾಗೂ ನೀರಾವರಿ ಎರಡೂ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಭಾಗದಲ್ಲಿ ಬರದ ತೀವ್ರತೆ ಹೆಚ್ಚಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಕ್ಟೇರ್‌ಗೆ ₹8,500 ಪರಿಹಾರ ಸಿಗಬೇಕಿದ್ದರೂ ಕೇಂದ್ರದಿಂದ ಇದುವರೆಗೆ ಅನುದಾನ ಬಂದಿಲ್ಲ. ಆದರೂ ಕೇಂದ್ರದ ಹಣಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ರೈತರಿಗೆ ಮೊದಲ ಕಂತಾಗಿ ₹2,500 ನೀಡಲು ನಿರ್ಧರಿಸಿದ್ದು, ಸರ್ಕಾರಿ ಆದೇಶ ಹೊರಡಿಸಿ ತಕ್ಷಣ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಸಬ್ಸಿಡಿ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರೈತ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ ₹60,000 ದಿಂದ ₹70,000 ವರೆಗೆ ನೆರವು ದೊರೆಯುತ್ತಿದ್ದು, ಸಂಕಷ್ಟದ ಸಮಯದಲ್ಲಿ ರೈತರನ್ನು ಕೈಬಿಡುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಉಂಟಾಗಿರುವ ಅಭಾವ ಪರಿಸ್ಥಿತಿಯಿಂದ ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಪ್ರಕಾರ ಕೇಂದ್ರದಿಂದ ₹11,000 ದಿಂದ ₹11,500 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯಕ್ಕೆ ಆಗಮಿಸಿದ್ದ ಮೂರು ಕೇಂದ್ರ ತಂಡಗಳು ಈಗಾಗಲೇ ಆಯ್ದ ಪ್ರದೇಶಗಳಲ್ಲಿ ಮಾದರಿ ಪರಿಶೀಲನೆ ನಡೆಸಿದ್ದು, ಉಪಗ್ರಹ ದತ್ತಾಂಶದ ಆಧಾರದ ಮೇಲೆಯೂ ಬರ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಇದರ ಜೊತೆಗೆ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು ಮತ್ತು ತುರ್ತು ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

Category
ಕರಾವಳಿ ತರಂಗಿಣಿ