ಬೆಂಗಳೂರು : ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸಚಿವರ ವಿರುದ್ಧ ಖಾಸಗಿ ಏಜೆನ್ಸಿಗಳ ಮೂಲಕ 'ಸ್ಟಿಂಗ್ ಆಪರೇಷನ್' ನಡೆಯುತ್ತಿರುವ ಕುರಿತು ಪ್ರಸ್ತಾಪವಾಗಿದ್ದು, ಸಚಿವರೆಲ್ಲರೂ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸುಮಾರು 50 ರಿಂದ 52 ಅಜೆಂಡಾಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ, ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ತಂತ್ರಗಾರಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇಲೆ, ಹಾಲಿ 4 ರಿಂದ 5 ಸಚಿವರನ್ನು ಗುರಿಯಾಗಿಸಿಕೊಂಡು ಅವರ ಭೇಟಿಗಳು, ಸಂಭಾಷಣೆ ಹಾಗೂ ದಿನನಿತ್ಯದ ಚಲನವಲನಗಳನ್ನು ರಹಸ್ಯವಾಗಿ ದಾಖಲಿಸುವ ಯತ್ನ ನಡೆಯುತ್ತಿದೆ ಎಂದು ಎಚ್ಚರಿಸಲಾಗಿದೆ.
ಈ ಖಾಸಗಿ ಏಜೆನ್ಸಿಗಳು ಸರ್ಕಾರಕ್ಕೆ ಮುಜುಗರ ತರಬಲ್ಲ ದಾಖಲೆಗಳನ್ನು ಸಂಗ್ರಹಿಸಲು ಸಕ್ರಿಯವಾಗಿದ್ದು, ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯ ವೇಳೆಯೂ ಸೂಕ್ಷ್ಮತೆಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ, ತಮ್ಮ ಮಾತಿನ ಮೇಲೂ ನಿಗಾ ವಹಿಸುವಂತೆ ನಿರ್ದೇಶಿಸಲಾಗಿದೆ. ಸಭೆಯಲ್ಲಿ ಈಗಾಗಲೇ ಈ ಸ್ಟಿಂಗ್ ಜಾಲದ ಅನುಮಾನಕ್ಕೆ ಒಳಗಾಗಿರುವ ಸಚಿವರ ವಿವರಗಳನ್ನೂ ಉಲ್ಲೇಖಿಸಿದ್ದು, ಸಿಎಂ ನೀಡಿದ ಈ ನೇರ ಮುನ್ನೆಚ್ಚರಿಕೆಯು ಹಲವು ಸಚಿವರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.