image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮಂಡ್ಯ ತಮಿಳು ಕಾಲೋನಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಸಜ್ಜು

ಮಂಡ್ಯ ತಮಿಳು ಕಾಲೋನಿ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಸಜ್ಜು

ಮಂಡ್ಯ : ಮಂಡ್ಯದ ಬಹುದಶಕಗಳ ವಿವಾದಿತ ತಮಿಳು ಕಾಲೋನಿ ಹಾಗೂ ಆಸ್ಪತ್ರೆ ಜಾಗದ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆ ನಡೆಸಿದೆ. ದಸರಾ ಹಬ್ಬ ಮುಗಿದ ತಕ್ಷಣವೇ ಈ ಬೃಹತ್ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಆಸ್ಪತ್ರೆಯ ಜಾಗವನ್ನು ಕಬಳಿಸಲು ನಿವಾಸಿಗಳನ್ನು ಮುನ್ನೆಲೆಗೆ ತಂದು ಯತ್ನಿಸುತ್ತಿದ್ದ ಪ್ರಭಾವಿಗಳ ಸಂಚಿಗೆ ಈಗ ತಾರ್ಕಿಕ ಅಂತ್ಯ ಹಾಡಲು ಜಿಲ್ಲಾಡಳಿತ ಮುಂದಾಗಿದೆ.

ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ಅವರು ತಮಿಳು ಕಾಲೋನಿ ತೆರವಿಗೆ ಆಗ್ರಹಿಸಿ ಸೆಪ್ಟೆಂಬರ್ 7ರಿಂದ ನಡೆಸಿದ ಆಮರಣಾಂತ ಉಪವಾಸ ಸತ್ಯಾಗ್ರಹದ ನಂತರ ಜಿಲ್ಲಾಡಳಿತದ ಪ್ರಕ್ರಿಯೆಗಳು ತೀವ್ರ ಚುರುಕುಗೊಂಡವು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕ ಪಿ. ರವಿಕುಮಾರ್ ಅವರ ಮಧ್ಯಪ್ರವೇಶ ಮತ್ತು ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾ ಕೇರ್ ಆಸ್ಪತ್ರೆ ಸ್ಥಾಪನೆಗೆ ನೀಡಿದ ಆದ್ಯತೆಯಿಂದಾಗಿ ಹಲವು ವರ್ಷಗಳ ವಿವಾದಕ್ಕೆ ಅಂತ್ಯ ಕಾಣಿಸುವ ನಿರ್ಧಾರಕ್ಕೆ ಬರಲಾಗಿದೆ. ಮೈಸೂರು ಗೆಜೆಟ್ ನೋಟಿಫಿಕೇಷನ್ ಅನ್ವಯ ಮಿಮ್ಸ್ (MIMS) ಮತ್ತು ಸರ್ಕಾರಿ ಪ್ರೌಢಶಾಲೆ ಜಾಗದ ಸರ್ವೇ ಕಾರ್ಯ, ಒತ್ತುವರಿದಾರರ ಗುರುತು ಹಾಗೂ ಉಚ್ಛ ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.

1979ರಲ್ಲಿ 5 ಎಕರೆ 25 ಗುಂಟೆ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿದಾಗಿನಿಂದ ಆರಂಭವಾದ ಈ ವಿವಾದ ಸುದೀರ್ಘ ಇತಿಹಾಸ ಹೊಂದಿದೆ. 2002-03ರ ವಾಂಬೆ ಯೋಜನೆ, 2008ರ ಅಗ್ನಿ ಅನಾಹುತ ಹಾಗೂ 2009ರ ಐಎಚ್‌ಎಸ್‌ಡಿಪಿ ಯೋಜನೆಗಳ ಬಳಿಕ ಕಾನೂನು ಸಂಘರ್ಷಗಳು ತೀವ್ರಗೊಂಡಿದ್ದವು. 2015ರಲ್ಲಿ ಹೈಕೋರ್ಟ್ ಕಾಲೋನಿ ಸ್ಥಳಾಂತರಕ್ಕೆ ಆದೇಶ ನೀಡಿದ ನಂತರ, ನಿವಾಸಿಗಳ ಪುನರ್ವಸತಿಗಾಗಿ ಹಾಲಹಳ್ಳಿ, ಚಿಕ್ಕಮಂಡ್ಯ ಸೇರಿದಂತೆ ಪರ್ಯಾಯ ಸ್ಥಳಗಳಲ್ಲಿ ಮನೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿತ್ತು. ಆದಾಗ್ಯೂ, 2023ರಿಂದ 2026ರವರೆಗೆ ಅಧಿಕಾರಿಗಳು ಫಲಾನುಭವಿಗಳ ಪಟ್ಟಿ ತಯಾರಿಸಲು ಮತ್ತು ಸರ್ವೇ ನಡೆಸಲು ತೆರಳಿದಾಗಲೆಲ್ಲ ನಿವಾಸಿಗಳಿಂದ ತೀವ್ರ ವಿರೋಧ ಹಾಗೂ ಅಸಹಕಾರ ಎದುರಾಗಿತ್ತು. ಪ್ರಸ್ತುತ ಹೈಕೋರ್ಟ್‌ಗೆ ಮಂಡಳಿಯಿಂದ ಅರ್ಜಿ ಸಲ್ಲಿಸಲಾಗಿದ್ದು, ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗವನ್ನು ಮುಕ್ತಗೊಳಿಸಲು ಆಡಳಿತ ಯಂತ್ರ ಸನ್ನದ್ಧವಾಗಿದೆ.

Category
ಕರಾವಳಿ ತರಂಗಿಣಿ