ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (SIR) ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಅರ್ಹ ಮತದಾರರ ಸೇರ್ಪಡೆಗಾಗಿ ಚುನಾವಣಾ ಆಯೋಗವು ಮತ್ತೆ ವಿಶೇಷ ಅಭಿಯಾನವನ್ನು ನಡೆಸಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕವಾಗಿ ಫಾರ್ಮ್ 7 ಸಲ್ಲಿಕೆ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಸೂಕ್ತ ವಿಚಾರಣೆ ನಡೆಸಿ ಕಾನೂನು ಪ್ರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯದಲ್ಲಿ ಜೂನ್ 16ರಿಂದ ಅಕ್ಟೋಬರ್ 4ರವರೆಗೆ ಒಟ್ಟು 91,278 ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಪ್ರಸ್ತಾಪಿತ ಹೆಸರು ಸೇರ್ಪಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಸಲ್ಲಿಕೆಯಾದ ನಮೂನೆಗಳ ಸಂಖ್ಯೆ ಶೂನ್ಯವಾಗಿದೆ. ಸೆಪ್ಟೆಂಬರ್ 23ರವರೆಗೆ ಸ್ವೀಕರಿಸಲಾದ 58,220 ಫಾರ್ಮ್ 7 ಅರ್ಜಿಗಳನ್ನು ಅಕ್ಟೋಬರ್ 22ರೊಳಗೆ ವಿಲೇವಾರಿ ಮಾಡಿ, ಅಕ್ಟೋಬರ್ 27ರಂದು ಪ್ರಕಟವಾಗುವ ಎಸ್ಐಆರ್ ಅಂತಿಮ ಮತದಾರರ ಪಟ್ಟಿಯಲ್ಲಿ ಪರಿಗಣಿಸಲಾಗುವುದು. ಉಳಿದ ಅರ್ಜಿಗಳನ್ನು ಅಂತಿಮ ಪಟ್ಟಿ ಪ್ರಕಟಣೆ ಬಳಿಕ ಕಾಲಾನುಕ್ರಮವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಫಾರ್ಮ್ 7ರ ಅಡಿಯಲ್ಲಿ ಯಾವುದೇ ಹೆಸರು ತೆಗೆದುಹಾಕಬೇಕಿದ್ದರೂ ಇಆರ್ಒಗಳು ಸಂಬಂಧಪಟ್ಟ ಮತದಾರರು ಹಾಗೂ ಅರ್ಜಿ ಸಲ್ಲಿಸಿದವರಿಗೆ ನೋಟಿಸ್ ನೀಡಿ, 7 ದಿನಗಳ ಕಾಲಾವಕಾಶದೊಂದಿಗೆ ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಇದುವರೆಗೆ ಫಾರ್ಮ್ 7 ಹಿನ್ನೆಲೆಯಲ್ಲಿ ಯಾವೊಬ್ಬ ಮತದಾರರ ಹೆಸರನ್ನೂ ಪಟ್ಟಿಯಿಂದ ಕೈಬಿಟ್ಟಿಲ್ಲ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 10 ಮತ್ತು ಗರಿಷ್ಠ 50 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದರೆ ಮತದಾರರ ನೋಂದಣಿ ನಿಯಮ 20ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಎಸ್ಐಆರ್ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ನಡೆಯುವ ಹೊಸ ಸೇರ್ಪಡೆ ಅಭಿಯಾನಕ್ಕೆ ತಂದೆ-ತಾಯಿಯ ವಿವರ ಅಥವಾ ದಾಖಲೆಗಳನ್ನು ನೀಡುವ ಅಗತ್ಯವಿರುವುದಿಲ್ಲ. ನಿಗದಿಪಡಿಸಲಾದ 12 ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದರ ರೂಪುರೇಷೆ ಹಾಗೂ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಅಕ್ಟೋಬರ್ 5ರ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 4,50,29,916 ಮತದಾರರಿದ್ದು, ಇದರಲ್ಲಿ 2,23,41,784 ಪುರುಷರು, 2,26,85,269 ಮಹಿಳೆಯರು ಹಾಗೂ 2,863 ತೃತೀಯ ಲಿಂಗಿ ಮತದಾರರಿದ್ದಾರೆ. ಪರಿಶೀಲನೆಗೆ ಸಂಬಂಧಿಸಿದಂತೆ ಸೃಜಿಸಲಾದ 43,82,313 ನೋಟಿಸ್ಗಳ ಪೈಕಿ ಶೇ 99.40 ರಷ್ಟು (43,55,818) ನೋಟಿಸ್ಗಳನ್ನು ತಲುಪಿಸಲಾಗಿದ್ದು, 36,89,063 (ಶೇ 84.69) ವಿಚಾರಣೆಗಳು ಪೂರ್ಣಗೊಂಡಿವೆ. ಒಟ್ಟಾರೆಯಾಗಿ ಪ್ರಸ್ತುತ ಹಂತದಲ್ಲಿ 9,10,732 ನಮೂನೆ 6, 4,677 ನಮೂನೆ 6A, 91,278 ನಮೂನೆ 7 ಹಾಗೂ 11,98,484 ನಮೂನೆ 8 ಸೇರಿದಂತೆ ಒಟ್ಟು 22,05,171 ಅರ್ಜಿಗಳು ಸ್ವೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.