image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಮಹಾನಗರ ಪ್ರದೇಶದ ವ್ಯವಸ್ಥಿತ ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ನೀಲಿ ನಕ್ಷೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ಮಹಾನಗರ ಪ್ರದೇಶದ ವ್ಯವಸ್ಥಿತ ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ನೀಲಿ ನಕ್ಷೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ವ್ಯಾಪ್ತಿಗೆ ಮುಂದಿನ 10 ರಿಂದ 15 ವರ್ಷಗಳಿಗಾಗಿ ಒಂದು ಬೃಹತ್ ಹಾಗೂ ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದ ಕೃಷ್ಣಾ ಗೃಹ ಕಚೇರಿಯಲ್ಲಿ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತು ಹಮ್ಮಿಕೊಳ್ಳಲಾಗಿದ್ದ ಉನ್ನತ ಮಟ್ಟದ ಸಲಹಾ ಸಮಿತಿ ಸಭೆಯು ಸೋಮವಾರ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಹಾಗೂ 2037ರ ಕೇವಲ ದಶಕದೊಳಗೆ 400-420 ಬಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ ಎಂದರು. ಈ ಆರ್ಥಿಕ ಬೆಳವಣಿಗೆಗೆ ತಕ್ಕಂತೆ ಬೆಂಗಳೂರು ಮಹಾನಗರ ಪ್ರದೇಶದಲ್ಲಿ (BMR) ಸಾರಿಗೆ, ವಸತಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಬಲವಾದ ಅಡಿಪಾಯ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಬಿಎಂಆರ್ ವ್ಯಾಪ್ತಿಯಲ್ಲಿ ಪ್ರಮುಖವಾಗಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ 7,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ 5,600 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಿಂಗಾಪುರದ 'ಪುಂಗಾಲ್' ಮಾದರಿಯಲ್ಲಿ ಅತ್ಯಾಧುನಿಕ 'ಎಐ ಸಿಟಿ' (AI City) ನಿರ್ಮಿಸುವುದಾಗಿ ಈಗಾಗಲೇ ಘೋಷಿಸಲಾಗಿದ್ದು, ಈ ಯೋಜನೆಗೆ ಪೂರಕವಾಗಿ ಎಐ ವಿಶ್ವವಿದ್ಯಾಲಯ ಸ್ಥಾಪನೆಗೂ ಸೂಕ್ತ ಸ್ಥಳಗಳನ್ನು ಶೀಘ್ರದಲ್ಲೇ ಗುರುತಿಸುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.

ಬೆಂಗಳೂರು ನಗರ ಜಿಲ್ಲೆಯ ಸಂಪೂರ್ಣ ಪ್ರದೇಶದ ವ್ಯವಸ್ಥಿತ ಅಭಿವೃದ್ಧಿಗಾಗಿ ವಿಶೇಷ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಪ್ರದೇಶಗಳನ್ನು ಹಂತ ಹಂತವಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ತರಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಭವಿಷ್ಯದ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇಡೀ ಬೆಂಗಳೂರು ನಗರ ಜಿಲ್ಲೆಯನ್ನು ಜಲಮಂಡಳಿ (BWSSB) ವ್ಯಾಪ್ತಿಗೆ ಸೇರಿಸಿ ಕುಡಿಯುವ ನೀರು ಮತ್ತು ಒಳಚರಂಡಿ ಜಾಲವನ್ನು ವಿಸ್ತರಿಸಲಾಗುವುದು ಎಂದರು. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ ಅಭಿವೃದ್ಧಿಪಡಿಸುವ ಕಾರ್ಯವೂ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ದಟ್ಟಣೆ ನಿವಾರಿಸಲು 2037ರ ವೇಳೆಗೆ ಹೆಚ್ಚುವರಿಯಾಗಿ 312 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆ, 72 ಕಿ.ಮೀ. ಸಬ್ ಅರ್ಬನ್ ರೈಲು ಯೋಜನೆ ಮತ್ತು 10 ಪ್ರಮುಖ ಹಬ್‌‌ಗಳನ್ನು ಸಂಪರ್ಕಿಸುವ 210 ಕಿ.ಮೀ. ವರ್ತುಲ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಕೆಜಿಎಫ್ ಕಾರಿಡಾರ್‌ಗಳನ್ನು ಬೆಸೆಯುವ 270 ಕಿ.ಮೀ. ಆರ್.ಆರ್.ಟಿ.ಎಸ್ (RRTS) ರಸ್ತೆ ಹಾಗೂ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಪ್ರಸ್ತಾವನೆಗಳೂ ಸಭೆಯ ಗಮನಕ್ಕೆ ಬಂದವು. 2037ರ ವೇಳೆಗೆ ಬಿಎಂಆರ್ ವ್ಯಾಪ್ತಿಗೆ ಸುಮಾರು 3600 ಎಂಎಲ್ ಡಿ (MLD) ಪ್ರಮಾಣದ ನೀರು ಬೇಕಾಗಲಿದ್ದು, ಕೈಗಾರಿಕೆ ಹಾಗೂ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ. ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡುವುದು ಮತ್ತು ಒಣಗಿದ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಿನ ದಶಕದಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಹಾಗೂ ಕಾರ್ಮಿಕ ವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ 6 ರಿಂದ 6.5 ಲಕ್ಷ ವಸತಿ ಮನೆಗಳನ್ನು ನಿರ್ಮಿಸುವ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಪ್ರಮುಖವಾಗಿ ನಾನಾ ಕೈಗಾರಿಕೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 40 ರಿಂದ 50 ಸಾವಿರ ಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು.

Category
ಕರಾವಳಿ ತರಂಗಿಣಿ