ಚಿತ್ರದುರ್ಗ: ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವ ಕುರಿತು ಬಂದಿರುವ ದೂರುಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಪ್ರತಿಯೊಂದು ಆಕ್ಷೇಪಣೆಯನ್ನೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಅಳಿಸಲ್ಪಟ್ಟಿರುವವರಲ್ಲಿ ಬಹುಪಾಲು ಹಿಂದೂಗಳೇ ಇದ್ದಾರೆ ಎಂದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಮಾರು 32 ಸಾವಿರ ಹೆಸರುಗಳು ಅಳಿಸಲ್ಪಟ್ಟಿದ್ದು, ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮತದಾರರಿದ್ದಾರೆ. ಹೀಗಿರುವಾಗ ಅಲ್ಪಸಂಖ್ಯಾತರ ಮತಗಳನ್ನು ಅಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಆಧಾರರಹಿತ ಎಂದು ಟೀಕಿಸಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಿರುವ ಆರೋಪಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಬಾಂಗ್ಲಾದೇಶದವರನ್ನು ಅಕ್ರಮ ದಾಖಲೆಗಳ ಮೂಲಕ ಸೇರಿಸಿದ್ದರೆ, ಅವರಿಗೆ ದಾಖಲೆ ನೀಡಿದವರು ಯಾರು ಎಂಬುದನ್ನು ಚುನಾವಣಾ ಆಯೋಗ ಪತ್ತೆಹಚ್ಚಬೇಕು. ಫಾರಂ ನಂ. 7 ರ ಮೂಲಕ ಮೃತಪಟ್ಟವರು, ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಕುರಿತು ಆಕ್ಷೇಪಣೆ ಸಲ್ಲಿಸುವುದು ಕಾನೂನುಬದ್ಧ ಅವಕಾಶವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಅಕ್ರಮಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕೂಡಿದೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಚಿತ್ರದುರ್ಗದ ಗಣೇಶೋತ್ಸವ ಮೆರವಣಿಗೆಯನ್ನು ಶ್ಲಾಘಿಸಿದ ರವಿ, ಗಣಪತಿ ಆರಾಧನೆಯು ಹಿಂದೂ ಸಮಾಜದ ಒಗ್ಗಟ್ಟನ್ನು ಬಲಪಡಿಸುವುದರ ಜೊತೆಗೆ ಜಾತಿಭೇದ ಹಾಗೂ ಅಸ್ಪೃಶ್ಯತೆಯನ್ನು ತೊಡೆದುಹಾಕುವ ಸಾಮಾಜಿಕ ಜಾಗೃತಿಯ ವೇದಿಕೆಯಾಗಬೇಕು ಎಂದು ಕರೆ ನೀಡಿದರು.