ಬೆಂಗಳೂರು: ಆರ್‌ಎಸ್‌ಎಸ್ ಅನ್ನು ಟೀಕಿಸುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಸಂಘವನ್ನು ನಾಶ ಮಾಡುವುದಾಗಿ ಹೇಳಿರುವ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ‘ತಿರುಕನ ಕನಸು’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಟೀಕಿಸಿದ್ದಾರೆ. ಶತಮಾನೋತ್ಸವ ಆಚರಿಸುತ್ತಿರುವ ಆರ್‌ಎಸ್‌ಎಸ್ ರಾಷ್ಟ್ರಭಕ್ತಿಯ ಸಿದ್ಧಾಂತವಾಗಿದ್ದು, ಅದನ್ನು ನಾಶ ಮಾಡಲು ಹೊರಡುವುದು ರಾಷ್ಟ್ರಭಕ್ತಿಯನ್ನೇ ನಾಶ ಮಾಡುವುದಕ್ಕೆ ಸಮಾನ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಹೊಸ ಕ್ಷೇತ್ರಗಳನ್ನು ಗೆಲ್ಲುವ ಮಾತಾಡುವ ಮೊದಲು, ಪ್ರಸ್ತುತ ಗೆದ್ದಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲಿನ ಕ್ರಮವನ್ನು ಖಂಡಿಸಿದ ಅವರು, ಸಿಸಿಟಿವಿ ಹಾಗೂ ಆಡಿಯೋ-ವಿಡಿಯೋ ಸಾಕ್ಷ್ಯಗಳಿದ್ದರೂ ದಾಳಿ ಮಾಡಿದವರನ್ನು ಬಿಟ್ಟು ಸಂತ್ರಸ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ ಎಂದು ಆರೋಪಿಸಿದರು. ಜೈಲಿನಲ್ಲಿ ಕಳೆದ 12 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪುನೀತ್ ಕೆರೆಹಳ್ಳಿ ಅವರ ಆರೋಗ್ಯಕ್ಕೆ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿ, ಸರ್ಕಾರ ಗುತ್ತಿಗೆದಾರರಿಗೆ ಸುಮಾರು ₹38,000 ಕೋಟಿ ಬಾಕಿ ಬಿಲ್ ಉಳಿಸಿಕೊಂಡಿದೆ ಎಂದು ದೂರಿದರು. ಮುಖ್ಯಮಂತ್ರಿಗಳು ಭರವಸೆ ನೀಡಿ ಮೂರು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ. ಬಾಕಿ ಹಣ ಸಿಗದೆ ಅನೇಕ ಗುತ್ತಿಗೆದಾರರು ಆಸ್ತಿ ಮಾರಾಟ, ಚಿನ್ನ ಅಡವಿಡುವುದು ಹಾಗೂ ಆತ್ಮಹತ್ಯೆಯಂತಹ ಹತಾಶ ನಿರ್ಧಾರಗಳಿಗೆ ತಳ್ಳಲ್ಪಟ್ಟಿದ್ದಾರೆ. ಕೆಆರ್‌ಐಡಿಎಲ್ ಎಂಜಿನಿಯರ್ ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ಸರ್ಕಾರದ ವಿಫಲತೆಗೆ ಸಾಕ್ಷಿಯಾಗಿದೆ ಎಂದ ಅವರು, ಸರ್ಕಾರ ಹೊಸ ಯೋಜನೆಗಳನ್ನು ಪ್ರಕಟಿಸುವ ಮುನ್ನ ಹಳೆಯ ಬಾಕಿ ಬಿಲ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.