ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿಯ ಮರಾಠ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ಜಂಟಿ ಸಹಯೋಗದೊಂದಿಗೆ ಮರಾಠ ಸಮುದಾಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ಭಾಗವಹಿಸಿ, ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಸರ್ಕಾರಿ ಯೋಜನೆಗಳು ಸಹಕಾರಿಯಾಗಲಿವೆ ಎಂದರು. ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳು ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮರಾಠ ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.