ಚಿಕ್ಕಮಗಳೂರು: “ಕಾಯಕವೇ ಕೈಲಾಸ” ಎಂಬ ತತ್ವದಂತೆ ಪ್ರತಿಯೊಂದು ವೃತ್ತಿಗೂ ಗೌರವ ನೀಡಬೇಕು. ನಗರವನ್ನು ಸ್ವಚ್ಛವಾಗಿಡಲು ನಿರಂತರವಾಗಿ ಶ್ರಮಿಸುವ ಪೌರಕಾರ್ಮಿಕರನ್ನು ತಾಯಿ ಸ್ಥಾನದಲ್ಲಿ ಗೌರವದಿಂದ ಕಾಣುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರಿನ ನಗರಸಭಾ ಆವರಣದಲ್ಲಿ ಆಯೋಜಿಸಲಾಗಿದ್ದ ‘ಪೌರಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು. ಸಂಬಳ ಪಡೆಯುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯಕ್ಕೆ ನ್ಯಾಯ ಒದಗಿಸಬೇಕು. ಚಿಕ್ಕಮಗಳೂರು ನಗರವನ್ನು ಹೊರಗಿನವರು ಸ್ವಚ್ಛ ನಗರ ಎಂದು ಗುರುತಿಸುತ್ತಿದ್ದರು, ಆದರೆ ಇತ್ತೀಚೆಗೆ 60 ಅಡಿ ರಸ್ತೆ, ಬೈಪಾಸ್ ರಸ್ತೆ ಹಾಗೂ ಉಪ್ಪಳ್ಳಿ ರಸ್ತೆಗಳಲ್ಲಿ ಕಸದ ರಾಶಿ ಕಾಣಿಸುತ್ತಿದ್ದು, ವ್ಯವಸ್ಥೆಯಲ್ಲಿ ಕೊರತೆ ಎದ್ದುಕಾಣುತ್ತಿದೆ. ಹಲವು ವರ್ಷಗಳ ಪರಿಶ್ರಮದಿಂದ ನಿರ್ಮಿಸಲಾದ ಮನೆಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆ ಎಂದರು.
ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ 76 ಮನೆಗಳಲ್ಲಿ 54 ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಉಳಿದ 22 ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಮನೆ ಇಲ್ಲದ ಇತರ ಪೌರಕಾರ್ಮಿಕರಿಗೂ ಹಂತ ಹಂತವಾಗಿ ನಿವೇಶನ ಮತ್ತು ಮನೆ ಒದಗಿಸಬೇಕು. ಮನೆ ನಿರ್ಮಾಣಕ್ಕೆ ನೀಡಲಾಗುವ ₹7 ಲಕ್ಷ ಸಬ್ಸಿಡಿ ಸೌಲಭ್ಯ ಪ್ರತಿಯೊಬ್ಬ ಅರ್ಹರಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೀರಿನ ಸರಬರಾಜು ಮಾಡುವ ವಾಟರ್‌ಮ್ಯಾನ್‌ಗಳನ್ನು ನೇರ ಪಾವತಿ ವ್ಯವಸ್ಥೆಗೆ ತಂದು ಪೌರಕಾರ್ಮಿಕರ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರಿ ನೀತಿಯಲ್ಲಿ ಬದಲಾವಣೆ ತರಬೇಕು. ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೆ ನ್ಯಾಯಯುತ ಸೌಲಭ್ಯ ದೊರೆಯಬೇಕು. ಮುಖ್ಯಮಂತ್ರಿಗಳು ಪೌರಕಾರ್ಮಿಕರ ವಿಶೇಷ ಭತ್ಯೆಯನ್ನು ₹10 ಸಾವಿರಕ್ಕೆ ಹೆಚ್ಚಿಸುವುದಾಗಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದ ಅವರು, ಗುತ್ತಿಗೆ ನೌಕರರಿಗೆ ನಗರಸಭೆ ಅನುದಾನದಿಂದ ಕನಿಷ್ಠ ₹1,500 ನೆರವು ನೀಡಲು ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿ ನಾಯ್ಕ್, ಪೌರಾಯುಕ್ತ ಬಸವರಾಜ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.