image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ಯಾರಂಟಿ ಪರಿಷ್ಕರಣೆಗೆ ಸರ್ಕಾರದ ನಿರ್ಧಾರ: ಡಿಕೆಶಿ ಸ್ಪಷ್ಟನೆ

ಗ್ಯಾರಂಟಿ ಪರಿಷ್ಕರಣೆಗೆ ಸರ್ಕಾರದ ನಿರ್ಧಾರ: ಡಿಕೆಶಿ ಸ್ಪಷ್ಟನೆ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕವಾಗಿ ಒಂದಷ್ಟು ತೊಂದರೆಯಾಗಿರುವುದು ನಿಜ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅರ್ಹರಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಯೋಜನೆಗಳನ್ನು ಮರು ಪರಿಶೀಲನೆ ಹಾಗೂ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಪ್ರತಿವರ್ಷ ಬರೋಬ್ಬರಿ 52 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆಯ ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ ಎಂದಿದ್ದಾರೆ. ಅರ್ಹ ಫಲಾನುಭವಿಗಳನ್ನು ಮಾತ್ರ ಗುರುತಿಸಿ ಯೋಜನೆಗಳನ್ನು ತಲುಪಿಸುವ ಮೂಲಕ ಸರ್ಕಾರದ ಹಣ ಉಳಿತಾಯ ಮಾಡುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ.

ಹೊರರಾಜ್ಯಗಳಿಂದ ಬಂದು ನೆಲೆಸಿದವರಿಗೆ ಉಚಿತ ಗ್ಯಾರಂಟಿ ಸೌಲಭ್ಯ ನೀಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯೋಜನೆಗಳ ಲಾಭ ಕೇವಲ ಕರ್ನಾಟಕದ ಮತದಾರರಿಗೆ ಮಾತ್ರ ಸಿಗುವಂತೆ ಅರ್ಜಿ ಪರಿಶೀಲನೆ ನಡೆಸಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲೂ ಈ ನಿಯಮ ಅನ್ವಯವಾಗಲಿದ್ದು, ಶಕ್ತಿ ಯೋಜನೆಯ ಉಚಿತ ಪ್ರಯಾಣದ ದುರುಪಯೋಗ ತಡೆಯಲು ರಾಜ್ಯದ ಮತದಾರರಿಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ 'ಸ್ಮಾರ್ಟ್ ಕಾರ್ಡ್' ನೀಡಲು ಲೆಕ್ಕಾಚಾರ ನಡೆಸಲಾಗಿದೆ. ಹೊರರಾಜ್ಯದ ಪ್ರಯಾಣಿಕರನ್ನು ಈ ಯೋಜನೆಯಿಂದ ಹೊರಗಿಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅನುದಾನ ಉಳಿತಾಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಇನ್ನು ಯೋಜನೆಗಳ ಪರಿಷ್ಕರಣೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪೂರ್ಣ ಬೆಂಬಲ ತಮಗಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವರಿಷ್ಠರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಆಡಳಿತ ನೀಡುವ ಮೂಲಕ 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಯಾರಿಗೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಾವು ಬಂಡೆಯಂತೆ ನಿಂತಿರುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ