image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಿವಿಲ್ ವ್ಯಾಜ್ಯದಲ್ಲಿ ಪೊಲೀಸ್ ಹಸ್ತಕ್ಷೇಪ: ತನಿಖಾಧಿಕಾರಿ ವಿರುದ್ಧ ವಿಚಾರಣೆಗೆ ಹೈಕೋರ್ಟ್ ಆದೇಶ

ಸಿವಿಲ್ ವ್ಯಾಜ್ಯದಲ್ಲಿ ಪೊಲೀಸ್ ಹಸ್ತಕ್ಷೇಪ: ತನಿಖಾಧಿಕಾರಿ ವಿರುದ್ಧ ವಿಚಾರಣೆಗೆ ಹೈಕೋರ್ಟ್ ಆದೇಶ

ಬೆಂಗಳೂರು : ನ್ಯಾಯಾಲಯದ ನೂರಾರು ಆದೇಶಗಳು ಮತ್ತು ಸರ್ಕಾರದ ಸುತ್ತೋಲೆಗಳ ಹೊರತಾಗಿಯೂ ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದ ಸಿವಿಲ್ ಪ್ರಕರಣದಲ್ಲಿ ಖಾಸಗಿ ಕಂಪನಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದ ಮಂಗಳೂರಿನ ಉಲ್ಲಾಳ ಠಾಣೆ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರ ವಿರುದ್ಧ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ತಾಕೀತು ಮಾಡಿದೆ.

ಎಲೆಕ್ಟ್ರಿಕಲ್ ಗುತ್ತಿಗೆದಾರ ಸುನೀಲ್ ಕುಮಾರ್ ಪೈಸ್ ನೀಡಿದ್ದ ದೂರಿನ ಆಧಾರದಲ್ಲಿ ಮಂಗಳೂರಿನ ಉಲ್ಲಾಳ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ 'ಝೈಟ್ ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್' ಹಾಗೂ ಅದರ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ನಡೆಸಿತು.

ವಿಚಾರಣೆ ವೇಳೆ ಕಂಪನಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, 60,39,046 ರೂ. ಪಾವತಿಸಬೇಕಿದೆ ಎಂದು ದೂರುದಾರರು ಸತ್ಯಾಂಶ ಮರೆಮಾಚಿದ್ದಾರೆ; ಕಂಪನಿಯು ಈಗಾಗಲೇ 50,11,983 ರೂ. ಪಾವತಿಸಿದೆ. ಒಪ್ಪಂದದ ಪ್ರಕಾರ ಯಾವುದೇ ವಿವಾದ ಉಂಟಾದರೆ ಸಿವಿಲ್ ಕೋರ್ಟ್ ಅಥವಾ ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳಬೇಕು. ಆದರೆ, ಸಂಪೂರ್ಣ ಸಿವಿಲ್ ಸ್ವರೂಪದ ಈ ಪ್ರಕರಣದಲ್ಲಿ ತನಿಖಾಧಿಕಾರಿಯು ಕಂಪನಿಯ ಎಲ್ಲ ನಿರ್ದೇಶಕರು ಹಾಗೂ ಉದ್ಯೋಗಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿರುವುದರಿಂದ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರಿಗೆ ಹಸ್ತಕ್ಷೇಪ ಮಾಡಲು ಅಧಿಕಾರ ಎಲ್ಲಿದೆ ಮತ್ತು ಬ್ಯಾಂಕ್ ಖಾತೆ ಫ್ರೀಜ್ ಮಾಡುವಂತಹ ದೊಡ್ಡ ಕ್ರಮವನ್ನು ಹೇಗೆ ಜರುಗಿಸಿದಿರಿ ಎಂದು ಪ್ರಶ್ನಿಸಿದರು. 28 ವರ್ಷ ಸೇವೆ ಸಲ್ಲಿಸಿದ್ದರೂ ಸಿವಿಲ್ ವಿಷಯದಲ್ಲಿ ಬ್ಯಾಂಕ್ ಖಾತೆ ನಿರ್ಬಂಧಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸುವ ತೀರ್ಮಾನಕ್ಕೆ ಬಂದಿತ್ತು. "ಅಮಾನತಾಗಿ ಸಮವಸ್ತ್ರ ಕಳೆದುಕೊಂಡರೆ ಮನೆಯಲ್ಲಿ ಹಾಲು-ಬಿಸ್ಕೆಟ್ ಹಾಕಿ ಸಾಕಿದ ನಾಯಿಯೂ ನಿಮ್ಮನ್ನು ಮೂಸುವುದಿಲ್ಲ, ಮನೆ ಹತ್ತಿರ ಹೋದರೆ ಬೊಗಳುತ್ತದೆ" ಎಂದು ತನಿಖಾಧಿಕಾರಿಗೆ ಕಠಿಣ ಶಬ್ದಗಳಲ್ಲಿ ಛೀಮಾರಿ ಹಾಕಿತು.

ಬಳಿಕ ರಾಜ್ಯ ಸರ್ಕಾರಿ ಅಭಿಯೋಜಕರು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಕೋರ್ಟ್ ಅಮಾನತು ಆದೇಶದಿಂದ ಹಿಂದೆ ಸರಿಯಿತು. ಆದಾಗ್ಯೂ, ತನಿಖಾಧಿಕಾರಿಯ ಕ್ರಮದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಯುಕ್ತರಿಗೆ ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.

Category
ಕರಾವಳಿ ತರಂಗಿಣಿ