ಮೈಸೂರು : ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಲಾಗಿದ್ದ ಉಪಹಾರ ಕೂಟಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರು ಒಂದು ತಾಸು ತಡವಾಗಿ, ಅಂದರೆ 10 ಗಂಟೆಗೆ ಆಗಮಿಸಿದರು. ಇದರಿಂದಾಗಿ ದಸರಾ ಆನೆಗಳ ಆರೈಕೆ ಮಾಡುವ ಮಾವುತರು ಹಾಗೂ ಕಾವಾಡಿಗರು ಸ್ಥಳದಲ್ಲಿ ಒಂದು ಗಂಟೆ ಕಾಲ ಕಾಯುವಂತಾಯಿತು.
ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿದ್ದ ಶಾಸಕ ತನ್ವೀರ್ ಸೇಠ್, ಈ ವಿಳಂಬದಿಂದ ತೀವ್ರ ಬೇಸರಗೊಂಡರು. 9:45ರವರೆಗೂ ಕಾಡಿದ್ದ ಅವರು, ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. "ಸಮಯ ಪ್ರಜ್ಞೆ ಇಲ್ವೇನ್ರೀ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್" ಎಂದು ತರಾಟೆಗೆ ತೆಗೆದುಕೊಂಡ ಸೇಠ್, "ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಲುಪಬೇಕು" ಎಂದು ಪ್ರತಿಪಾದಿಸಿ ಉಪಹಾರ ಕೂಟದ ಸ್ಥಳದಿಂದ ನಿರ್ಗಮಿಸಿದರು. ಬಳಿಕ 10 ಗಂಟೆಗೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿದರು. ಈ ಘಟನೆಯು ಮೈಸೂರು ಕಾಂಗ್ರೆಸ್ ವಲಯದಲ್ಲಿ ಸಣ್ಣ ಮಟ್ಟದ ಇರುಸುಮುರುಸು ಉಂಟುಮಾಡಿದೆ.