ಚಿಕ್ಕಮಗಳೂರು: ಚುನಾವಣೆಯಲ್ಲಿ ಸೋತಾಗಲೆಲ್ಲ ಮತದಾರರ ತೀರ್ಪನ್ನು ಗೌರವಿಸುವ ಬದಲು ಚುನಾವಣಾ ಆಯೋಗ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇವಿಎಂಗಳನ್ನು ಪ್ರಶ್ನಿಸುವುದು ಕಾಂಗ್ರೆಸ್ ಪಕ್ಷದ ರಾಜಕೀಯ ಸಂಸ್ಕೃತಿಯಾಗಬಾರದು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವರು ಚುನಾವಣಾ ಆಯೋಗ ಮತ್ತು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಮಾಡುತ್ತಿರುವ ಆರೋಪಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಆರೋಪ ಮಾಡುವ ಮುನ್ನ ಸೂಕ್ತ ದಾಖಲೆ ಹಾಗೂ ಸತ್ಯಾಂಶಗಳನ್ನು ಜನರ ಮುಂದಿಡಬೇಕು ಎಂದು ಸವಾಲು ಹಾಕಿದ್ದಾರೆ.
ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಸತತವಾಗಿ ಅನುಮಾನ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದ ಸಿ.ಟಿ. ರವಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲೇ ಚುನಾವಣೆಗಳು ನಡೆದಿದ್ದು, ಆಗಲೂ ಕಾಂಗ್ರೆಸ್ ಸೋಲು ಕಂಡ ಉದಾಹರಣೆಗಳಿವೆ ಎಂದರು. 2014ರಲ್ಲಿ 44 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ 52 ಸ್ಥಾನಗಳಿಗೆ ಕಾಂಗ್ರೆಸ್ ಸೀಮಿತವಾದಾಗ ಎಸ್‌ಐಆರ್ ಪ್ರಕ್ರಿಯೆಯೇ ಇರಲಿಲ್ಲ. ಹಾಗಿದ್ದಾಗ ಆ ಸೋಲುಗಳಿಗೆ ಆಯೋಗ ಹೇಗೆ ಕಾರಣವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸಿದ ಅವರು, ಗೆದ್ದಾಗ ವ್ಯವಸ್ಥೆ ಸರಿ ಇದೆ, ಸೋತಾಗ ಆಯೋಗದ ಮೇಲೆ ಆರೋಪ ಮಾಡುವುದು ತರ್ಕಬದ್ಧವಲ್ಲ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮವಾಗಿದ್ದು, ಪ್ರತಿಯೊಂದು ಸೋಲಿಗೂ ಆಯೋಗವನ್ನು ಹೊಣೆ ಮಾಡುವುದು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮಾರ್ಚ್ 2024ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನ ಸತತ ಸೋಲುಗಳು ಅದಕ್ಕೂ ಬಹಳ ಹಿಂದಿನಿಂದಲೂ ನಡೆಯುತ್ತ ಬಂದಿವೆ. ಆದ್ದರಿಂದ ತಮ್ಮ ಹಿನ್ನಡೆಗೆ ಆಯುಕ್ತರನ್ನು ಹೊಣೆ ಮಾಡುವುದು ಸರಿಯಲ್ಲ ಎಂದ ಅವರು, 1951ರಿಂದ 2004ರವರೆಗೆ ದೇಶದಲ್ಲಿ 8 ಬಾರಿ ಎಸ್‌ಐಆರ್ ನಡೆದಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು 20 ವರ್ಷಗಳ ಬಳಿಕ ನಡೆಸಲಾಗುತ್ತಿರುವ ಈ ಪ್ರಕ್ರಿಯೆಯನ್ನು ಕೇರಳದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರೇ ಸ್ವಾಗತಿಸಿರುವುದನ್ನು ನೆನಪಿಸಿದರು. ಕಾಂಗ್ರೆಸ್ ಪಕ್ಷ ತನ್ನ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಹಾಗೂ ಮೈತ್ರಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಧಾರರಹಿತವಾಗಿ ಆರೋಪಿಸುವ ಬದಲು, ಯಾವ ಮತಗಟ್ಟೆಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಗಳನ್ನು ನೀಡಲಿ ಎಂದು ಸಿ.ಟಿ. ರವಿ ಆಗ್ರಹಿಸಿದರು.