image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗೃಹಲಕ್ಷ್ಮಿ ಹಾಗೂ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮಧು ಹೆಚ್.ಎಂ ಸೂಚನೆ

ಗೃಹಲಕ್ಷ್ಮಿ ಹಾಗೂ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮಧು ಹೆಚ್.ಎಂ ಸೂಚನೆ

ಶಿವಮೊಗ್ಗ: ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಮರ್ಪಕವಾಗಿ ಜಮೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪಟ್ಟಿಯಿಂದ ಅನರ್ಹರನ್ನು ರದ್ದುಪಡಿಸಬೇಕು ಎಂದು ತಾಲೂಕು ಮಟ್ಟದ ಗ್ರಾಮೀಣ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಧು ಹೆಚ್.ಎಂ. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಪಿಎಲ್‌ ಕಾರ್ಡ್‌ನಿಂದ ಎಪಿಎಲ್‌ ಕಾರ್ಡ್‌ಗೆ ಪರಿವರ್ತನೆಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಿ, ಅರ್ಹ ಬಡವರಿಗೆ ತಕ್ಷಣವೇ ನ್ಯಾಯ ಒದಗಿಸಬೇಕು ಎಂದು ಅವರು ತಿಳಿಸಿದರು.

ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಯಡಿ ಈಗಾಗಲೇ ಶೇ. 97ರಷ್ಟು ಮರುಪರಿಶೀಲನೆ ಪೂರ್ಣಗೊಂಡಿದ್ದು, ಹೊಸದಾಗಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೂ ಯೋಜನೆಯ ಸೌಲಭ್ಯ ತಲುಪಿಸಲು ಕ್ರಮ ವಹಿಸಬೇಕು ಎಂದರು. ಮುಂಬರುವ ಮಧ್ಯಾವಧಿ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ದೀರ್ಘಾವಧಿ ವಿದ್ಯುತ್ ಕಡಿತಗೊಳಿಸುವ ಮುನ್ನ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಶಕ್ತಿ ಯೋಜನೆಯಡಿ ವಿದ್ಯಾರ್ಥಿಗಳಿಗೆ 70 ಕಿ.ಮೀ. ಪ್ರಯಾಣದ ಮಿತಿಯಲ್ಲಿ ಬಸ್‌ಪಾಸ್‌ ವಿತರಿಸಲು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಸಮಯದಲ್ಲಿ ನಿಗದಿತ ವೇಳಾಪಟ್ಟಿಯಂತೆ ಬಸ್‌ಗಳು ಸಂಚರಿಸಬೇಕು ಹಾಗೂ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿರುವ ಗ್ರಾಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರು, ಮಹಿಳಾ ಮೀಸಲು, ಇತರೆ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಸದಸ್ಯರನ್ನು ಒಳಗೊಂಡ ಆರು ಸದಸ್ಯರ ಗ್ರಂಥಾಲಯ ಸಮಿತಿಗಳನ್ನು ತಕ್ಷಣವೇ ರಚಿಸಲು ಮಹಾನಗರ ಪಾಲಿಕೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು. ಈ ಸಮಗ್ರ ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮೀಣ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಆರ್. ಶಿವಣ್ಣ, ತಾಲೂಕು ಮಟ್ಟದ ಸಮಿತಿ ಸದಸ್ಯ ಕಾರ್ಯದರ್ಶಿ ಪರಮೇಶ್ವರ್ ಸೇರಿದಂತೆ ಹಲವು ಇಲಾಖೆಗಳ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ