ಬೆಂಗಳೂರು: ರಾಜ್ಯದ ರೈತರ ಭೂಮಿಯ ಪಹಣಿಯಲ್ಲಿ (ಆರ್‌ಟಿಸಿ) ಮಹತ್ವದ ಬದಲಾವಣೆಗಳನ್ನು ತರಲು ಕಂದಾಯ ಇಲಾಖೆ ಮುಂದಾಗಿದ್ದು, ಇನ್ನು ಮುಂದೆ ಪಹಣಿಯಲ್ಲಿ ಭೂ ಮಾಲೀಕರ ಫೋಟೋ, ವಿಳಾಸ, ಆಧಾರ್ ಸಂಖ್ಯೆ ಹಾಗೂ 'ಫ್ರೂಟ್ಸ್' (FRUITS) ಐಡಿ ಮಾಹಿತಿಗಳು ಮುದ್ರಣಗೊಳ್ಳಲಿವೆ. ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ 'ಆಕಾರ್‌ಬಂಧ್' ದಾಖಲೆಗಳನ್ನು ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದ್ದು, ನಕ್ಷೆಯಲ್ಲಿರುವ ವಿಸ್ತೀರ್ಣಕ್ಕೂ ಪಹಣಿಯಲ್ಲಿರುವ ವಿಸ್ತೀರ್ಣಕ್ಕೂ ಇರುವ ವ್ಯತ್ಯಾಸ ಹಾಗೂ ಗೊಂದಲಗಳು ಇದರಿಂದ ಬಗೆಹರಿಯಲಿವೆ. ಅಲ್ಲದೆ, ಪ್ರತಿಯೊಂದು ಆರ್‌ಟಿಸಿಯಲ್ಲೂ ಕ್ಯೂಆರ್ ಕೋಡ್ ವ್ಯವಸ್ಥೆ ಇರಲಿದ್ದು, ಜಮೀನಿನ ಮೇಲಿರುವ ಸಾಲ ಸೇರಿ ಇತರೆ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.
ಭೂ ಮಾಲೀಕರಿಗೆ ಮಾಲೀಕತ್ವದ ಖಾತ್ರಿ ನೀಡಲು ಪಹಣಿಯನ್ನು ಆಧಾರ್‌ಗೆ ಜೋಡಿಸಿರುವ ಇಲಾಖೆಯು, ಇದರ ಮುಂದುವರೆದ ಭಾಗವಾಗಿ ಜಿಯೋ-ರೆಫರೆನ್ಸ್‌ಡ್ ನಕ್ಷೆ ಮತ್ತು ಓಪನ್ ಲೊಕೇಷನ್ ಕೋಡ್‌ಗಳೊಂದಿಗೆ ಡಿಜಿಟಲೀಕರಣಗೊಳಿಸಿ ನವೀಕೃತ ಪಹಣಿ ವಿತರಿಸಲು ತೀರ್ಮಾನಿಸಿದೆ. ಜಮೀನಿನ ಪಹಣಿಯಲ್ಲಿ ಹೆಸರು ಇರುವುದು ಎಂದರೆ ಭೂಮಿಯ ಸಂಪೂರ್ಣ ಮಾಲೀಕತ್ವ ಎಂದರ್ಥವಲ್ಲ ಎಂಬ ಸಮಸ್ಯೆಗೆ ಅಂತ್ಯ ಹಾಡಿ, 'ದಾಖಲೆ'ಯಿಂದ 'ಪೂರ್ಣ ಹಕ್ಕು' ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಆಧಾರಿತ ಬದಲಾವಣೆ ತರಲಾಗುತ್ತಿದೆ.
ಮುಂಬರುವ 3-4 ತಿಂಗಳಲ್ಲಿ ಕನಿಷ್ಠ 25 ಲಕ್ಷ ನವೀಕೃತ ಆರ್‌ಟಿಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಇದರಿಂದ ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಕ್ರಮ ಜಮೀನು ಕಸಿಯುವ ಯತ್ನಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಆರಂಭಿಕ ಹಂತದಲ್ಲಿ ಏಕಮಾಲೀಕತ್ವ ಹೊಂದಿರುವ ಆರ್‌ಟಿಸಿಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಜಂಟಿ ಮಾಲೀಕತ್ವದ ಆರ್‌ಟಿಸಿಗಳಿಗೆ ಮಾಲೀಕರು ವಿವಿಧ ಕಂದಾಯ ಸೇವೆ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಹೊಸ ಮಾದರಿಯ ಪಹಣಿಗಳನ್ನು ವಿತರಿಸಲಾಗುವುದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.