image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ತಡೆದ ಏರ್‌ಟೆಲ್

ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ತಡೆದ ಏರ್‌ಟೆಲ್

ಬೆಂಗಳೂರು : ದೇಶಾದ್ಯಂತ ಡಿಜಿಟಲ್ ವಂಚನೆ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ನಡುವೆ, ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ತನ್ನ ಅತ್ಯಾಧುನಿಕ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ 9,840 ಕೋಟಿಗೂ ಹೆಚ್ಚು ಸ್ಪ್ಯಾಮ್ ಕರೆಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. ಇದರೊಂದಿಗೆ 440 ಕೋಟಿ ನಕಲಿ ಸಂದೇಶಗಳನ್ನು ಗುರುತಿಸಿದ್ದು, 16.2 ಲಕ್ಷಕ್ಕೂ ಅಧಿಕ ಅಪಾಯಕಾರಿ ಲಿಂಕ್‌ಗಳನ್ನು ನಿರ್ಬಂಧಿಸುವ ಮೂಲಕ ಡಿಜಿಟಲ್ ಸುರಕ್ಷತೆಯಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಕೇವಲ ಸ್ಪ್ಯಾಮ್ ಕರೆಗಳಿಗೆ ಸೀಮಿತವಾಗದೆ ನಕಲಿ ಬ್ಯಾಂಕಿಂಗ್ ರಿಕ್ವೆಸ್ಟ್, ಹೂಡಿಕೆ ಆಮಿಷ, ಒಟಿಪಿ ಆಧಾರಿತ ಲೂಟಿ ಹಾಗೂ ಇನ್ನೊಬ್ಬರ ಸೋಗಿನಲ್ಲಿ ಮೋಸ ಮಾಡುವ ಹಂತಕ್ಕೆ ತಲುಪಿವೆ. ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರದ (I4C) ವರದಿ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಭಾರತೀಯರು ಸೈಬರ್ ವಂಚನೆಯಿಂದ ₹52,976 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಒಟ್ಟಾರೆ ಅಪರಾಧ ಪ್ರಮಾಣ ತಗ್ಗಿದ್ದರೂ, ಸೈಬರ್ ಅಪರಾಧಗಳು ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳು ದೃಢಪಡಿಸಿವೆ.

ಈ ಹಿನ್ನೆಲೆಯಲ್ಲಿ ಗ್ರಾಹಕರ ಭದ್ರತೆಗೆ ಆದ್ಯತೆ ನೀಡಿರುವ ಏರ್‌ಟೆಲ್, 2024ರಲ್ಲಿ ದೇಶದ ಪ್ರಪ್ರಥಮ ನೆಟ್‌ವರ್ಕ್ ಆಧಾರಿತ ಎಐ ಸ್ಪ್ಯಾಮ್ ಪತ್ತೆ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಗ್ರಾಹಕರು ಯಾವುದೇ ಪ್ರತ್ಯೇಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಅಥವಾ ದೂರು ಸಲ್ಲಿಸುವ ಅಗತ್ಯವಿಲ್ಲದೆ, ನೆಟ್‌ವರ್ಕ್‌ನ ಹಿನ್ನೆಲೆಯಲ್ಲೇ ಸ್ವಯಂಚಾಲಿತವಾಗಿ ವಂಚನೆಗಳನ್ನು ತಡೆಯಲಾಗುತ್ತಿದೆ.

ಏರ್‌ಟೆಲ್‌ನ ಈ 'ಸೇಫ್ ನೆಟ್‌ವರ್ಕ್' ವ್ಯವಸ್ಥೆಯು ಅನುಮಾನಾಸ್ಪದ ಸಂಭಾಷಣೆಗಳನ್ನು ಗುರುತಿಸಿ ಒಟಿಪಿ ವಂಚನೆ ತಡೆಯುವುದು, ನಕಲಿ ವೆಬ್‌ಸೈಟ್‌ಗಳು ಹಾಗೂ ಅಪಾಯಕಾರಿ ಲಿಂಕ್‌ಗಳನ್ನು ರಿಯಲ್-ಟೈಮ್‌ನಲ್ಲಿ ಬ್ಲಾಕ್ ಮಾಡುವುದು, ಮತ್ತು ಕರೆ ಮಾಡುವ ಅಧಿಕೃತ ಸಂಸ್ಥೆಗಳ ಹೆಸರುಗಳನ್ನು ಪ್ರದರ್ಶಿಸುವ ತಂತ್ರಜ್ಞಾನವನ್ನು ಒಳಗೊಂಡಿದೆ. ಬ್ಯಾಂಕಿಂಗ್, ಆರೋಗ್ಯ ಮತ್ತು ಸರ್ಕಾರಿ ಸೇವೆಗಳು ಡಿಜಿಟಲ್ ಮಯವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಏರ್‌ಟೆಲ್‌ನ ಈ ಮುನ್ನೆಚ್ಚರಿಕಾ ಕ್ರಮವು ಸುರಕ್ಷಿತ ಡಿಜಿಟಲ್ ಸಂವಹನಕ್ಕೆ ಹೊಸ ದಿಕ್ಸೂಚಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ