ಬೆಂಗಳೂರು: ವಿಧಾನ ಮಂಡಲದ/ವಿಧಾನ ಸಭೆಯ ಸಮಿತಿಗಳ ವರದಿಗಳ ಪ್ರಾಮುಖ್ಯತೆಯನ್ನು ಅರಿಯಲು ಹಾಗೂ ವರದಿಗಳಲ್ಲಿ ಶಿಫಾರಸ್ಸುಗಳ ಅನುಷ್ಠಾನಕ್ಕೆ ಅವುಗಳನ್ನು ಕಾರ್ಯಾಂಗದ ಗಮನಕ್ಕೆ ತರಲಾಗುವುದು. ಶಿಫಾರಸುಗಳನ್ನು ಸದನದಲ್ಲಿ ಚರ್ಚಿಸಲು ದಿನ ನಿಗದಿಪಡಿಸಿ ಸಮಿತಿಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.ಅವರು ನೂತನವಾಗಿ ರಚಿಸಲ್ಪಟ್ಟ ವಿಧಾನ ಮಂಡಲದ / ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಸಮಿತಿ ಸಭೆಗಳು ಪ್ರತಿ ತಿಂಗಳಲ್ಲಿ ನಾಲ್ಕು ದಿನಗಳು ನಡೆಯುತ್ತಿರುವುದರಿಂದ ಒಂದು ಸಭೆಯನ್ನು
ಕಡ್ಡಾಯವಾಗಿ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ ಮೀಸಲಿಟ್ಟು ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸಿ ಕಾರ್ಯಾಂಗವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿದೆ ಎಂಬುದನ್ನು ಇನ್ನಷ್ಟು ಬಲಪಡಿಸಬೇಕು. ಎಲ್ಲಾ ಸಮಿತಿ ಸಭೆಗಳಿಗೆ ಸರ್ಕಾರದ ಇಲಾಖಾ ಮುಖ್ಯಸ್ಥರು ಅಂದರೆ ಸರ್ಕಾರದ ಕಾರ್ಯದರ್ಶಿ ಹಾಗೂ ಮೇಲ್ಪಟ್ಟ ಅಧಿಕಾರಿಗಳು ಭಾಗವಹಿಸಿ ಸಮಿತಿಗಳಿಗೆ ಸಹಕರಿಸುವಂತೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ಹಾಜರಿದ್ದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆಯನ್ನು ನೀಡಿದರು.
ಸಮಿತಿ ಸಭೆಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಸಭೆಯ ಮೂರು ದಿನಗಳಿಗೆ ಮುಂಚಿತವಾಗಿ ಒದಗಿಸಿ ಸಮಿತಿ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಸಮಿತಿಗಳ ಯಶಸ್ವೀ ಕಾರ್ಯನಿರ್ವಹಣೆಗೆ ವಿಧಾನ ಸಭೆ ಸಚಿವಾಲಯದಲ್ಲಿ ಒಬ್ಬ ಸಮನ್ವಯಾಧಿಕಾರಿಯನ್ನು (Co-ordinating officer) ನೇಮಿಸಲು ಸಮಿತಿಯ ಅಧ್ಯಕ್ಷರುಗಳ ಗಮನಕ್ಕೆ ತರಲಾಯಿತು. ವಿಧಾನ ಮಂಡಲದ/ವಿಧಾನ ಸಭೆಯ ಸಮಿತಿಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಶಾಸಕಾಂಗಕ್ಕೆ ಜವಾಬ್ದಾರಿಯುತವಾಗಿರುವುದನ್ನು ಅನುಷ್ಠಾನಗೊಳಿಸಿ ಸಂಸದೀಯ ವ್ಯವಸ್ಥೆ ಬಲಿಷ್ಠಗೊಳಿಸಬೇಕೆಂದರು.
ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು,ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್,ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.