image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಸ್ತೂರಿ ರಂಗನ್ ವರದಿ: ಸರ್ಕಾರದ ತುರ್ತು ಕ್ರಮಕ್ಕೆ ಸಿ.ಟಿ. ರವಿ ಒತ್ತಾಯ

ಕಸ್ತೂರಿ ರಂಗನ್ ವರದಿ: ಸರ್ಕಾರದ ತುರ್ತು ಕ್ರಮಕ್ಕೆ ಸಿ.ಟಿ. ರವಿ ಒತ್ತಾಯ

ಬೆಂಗಳೂರು: ಪಶ್ಚಿಮ ಘಟ್ಟ ವ್ಯಾಪ್ತಿಯ ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಸ್ಥಳೀಯ ಜನರಲ್ಲಿ ಉಂಟಾಗಿರುವ ಭೀತಿ ಹಾಗೂ ಆತಂಕ ನಿವಾರಿಸಲು ರಾಜ್ಯ ಸರ್ಕಾರ ತಕ್ಷಣವೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ಹಾಗೂ ಜನರ ಜೀವನೋಪಾಯವನ್ನು ಸಮತೋಲನದಲ್ಲಿ ಕೊಂಡೊಯ್ಯಲು ಅವರು ನಾಲ್ಕು ಪ್ರಮುಖ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಮೊದಲನೆಯದಾಗಿ, ಪ್ರಸ್ತುತ ಜಾರಿಯಲ್ಲಿರುವ ಕರಡು ಅಧಿಸೂಚನೆಗೆ ತಡೆಯಾಜ್ಞೆ ತರಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ಎರಡನೆಯದಾಗಿ, ಕೇರಳ ರಾಜ್ಯದ ಮಾದರಿಯಂತೆ ಕಂದಾಯ, ಅರಣ್ಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಜಂಟಿ ತಂಡವನ್ನು ರಚಿಸಿ, ಪಶ್ಚಿಮ ಘಟ್ಟ ಪ್ರದೇಶದ ಪ್ರತಿಯೊಂದು ಗ್ರಾಮದಲ್ಲೂ ಭೌತಿಕ ಸಮೀಕ್ಷೆ ನಡೆಸಬೇಕು. ಮೂರನೆಯದಾಗಿ, ನೈಸರ್ಗಿಕ ವಲಯ ಮತ್ತು ಸಾಂಸ್ಕೃತಿಕ ವಲಯಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ, ಸಾಂಸ್ಕೃತಿಕ ವಲಯದಲ್ಲಿ ಮುಂಬರುವ 100 ವರ್ಷಗಳ ಕೃಷಿ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅಗತ್ಯಗಳಿಗೆ ಸ್ಪಷ್ಟ ಯೋಜಿತ ಅವಕಾಶ ಕಲ್ಪಿಸಬೇಕು. ನಾಲ್ಕನೆಯದಾಗಿ, ಪರಿಸರ ಸೂಕ್ಷ್ಮ ವಲಯವನ್ನು ಹೊರತುಪಡಿಸಿ ಸಾಂಸ್ಕೃತಿಕ ಲ್ಯಾಂಡ್‌ಸ್ಕೇಪ್‌ನಲ್ಲಿ ಯಾವ ಚಟುವಟಿಕೆಗಳಿಗೆ ಅವಕಾಶವಿದೆ ಮತ್ತು ಯಾವುದಕ್ಕೆ ನಿರ್ಬಂಧವಿದೆ ಎಂಬುದರ ಕುರಿತು ಪ್ರತ್ಯೇಕ ಹಾಗೂ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.

ಪರಿಸರ ಉಳಿಯಬೇಕು ಎಂಬ ನೆಪದಲ್ಲಿ ಸ್ಥಳೀಯ ಜನರ ಜೀವನೋಪಾಯವೇ ಹೋದರೂ ಪರವಾಗಿಲ್ಲ ಎನ್ನುವ ಅತಿರೇಕವೂ ಬೇಡ, ಹಾಗೆಯೇ ಜನರ ಬದುಕಿಗಾಗಿ ಪರಿಸರ ನಾಶವಾದರೂ ಪರವಾಗಿಲ್ಲ ಎನ್ನುವ ಧೋರಣೆಯೂ ಸಲ್ಲದು. ಇವೆರಡರ ನಡುವೆ ಬುದ್ಧನ 'ಮಧ್ಯಮ ಮಾರ್ಗ'ವನ್ನು ಅನುಸರಿಸಿ, ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯರ ಜನಜೀವನವನ್ನೂ ರಕ್ಷಿಸುವ ಸಮತೋಲಿತ ಹಾದಿಯಲ್ಲಿ ಸಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.

Category
ಕರಾವಳಿ ತರಂಗಿಣಿ