image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

‘ವಿಶೇಷ ಅಧಿವೇಶನ’ ಪದಬಳಕೆ ಸುತ್ತ ವಿಧಾನಸಭೆಯಲ್ಲಿ ಕಿರಿಕ್: ಅಶೋಕ್ - ಡಿಕೆಶಿ ನಡುವೆ ತೀವ್ರ ವಾಕ್ಸಮರ

‘ವಿಶೇಷ ಅಧಿವೇಶನ’ ಪದಬಳಕೆ ಸುತ್ತ ವಿಧಾನಸಭೆಯಲ್ಲಿ ಕಿರಿಕ್: ಅಶೋಕ್ - ಡಿಕೆಶಿ ನಡುವೆ ತೀವ್ರ ವಾಕ್ಸಮರ

ಬೆಂಗಳೂರು: ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಬರಗಾಲದ ಕುರಿತು ಚರ್ಚಿಸಲು ಸರ್ಕಾರ ಕರೆದಿರುವ ವಿಧಾನಮಂಡಲ ಅಧಿವೇಶನದ ಆರಂಭದಲ್ಲೇ ‘ವಿಶೇಷ ಅಧಿವೇಶನ’ ಪದಬಳಕೆ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.

ರಾಜ್ಯಪಾಲರು ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸದಿರುವಾಗ ಇದನ್ನು ‘ವಿಶೇಷ ಅಧಿವೇಶನ’ ಎಂದು ಹೇಗೆ ಕರೆಯುತ್ತೀರಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ನೀನು ಹೇಗಾದರೂ ಕರೆಯಪ್ಪಾ' ಎಂದಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ‘ವಿಶೇಷ ಅಧಿವೇಶನ’ ಎಂದು ಮುದ್ರಿಸಿರುವ ಪ್ರಿಂಟಿಂಗ್ ತಪ್ಪಿಗೆ ಕಾರಣರಾದವರಿಗೆ ಛೀಮಾರಿ ಹಾಕಿ ಎಂದು ಅಶೋಕ್ ಆಗ್ರಹಿಸಿದಾಗ, ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ಕ್ರೆಡಿಟ್ ಪಡೆಯುತ್ತಿರುವುದನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ, ಸದನದಲ್ಲಿ ಯಾರೂ ಇಗೋ ಇಟ್ಟುಕೊಳ್ಳಬಾರದು ಎಂದು ಮನವಿ ಮಾಡಿದರು.

ಈ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಇದು 10ನೇ ಅಧಿವೇಶನದ ಮುಂದುವರಿದ ಉಪವೇಶನವಾಗಿದೆ. 'ವಿಶೇಷ ಅಧಿವೇಶನ' ಎಂದು ಮುದ್ರಿಸಿರುವುದು ತಮ್ಮದೇ ತಪ್ಪು ಹಾಗೂ ಅದನ್ನು 'ವಿಶೇಷ ಚರ್ಚೆ' ಎಂದು ತಿದ್ದಿಕೊಂಡು ಕಲಾಪ ಮುಂದುವರಿಸೋಣ ಎಂದು ವಿನಂತಿಸಿದರು. ಸಚಿವರ ಈ ವಿವರಣೆಗೆ ವಿರೋಧ ಪಕ್ಷದ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಈ ಅಧಿವೇಶನವನ್ನು ಕರೆಯಲಾಗಿದೆ. ಅಧಿವೇಶನಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ ಸಾರ್ವಜನಿಕರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಸ್ತೂರಿ ರಂಗನ್ ವರದಿಯಿಂದ ಜನರಿಗಾಗುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದು, ಈ ಕುರಿತು ವಿಸ್ತೃತ ಚರ್ಚೆಗೆ ವಿಪಕ್ಷಗಳಿಗೆ ಅವಕಾಶ ನೀಡಲಾಗಿದೆ. ಇದು ಎಲ್ಲರ ಸರ್ಕಾರವಾಗಿದ್ದು ನಿಲುವಳಿ ಸೂಚನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರ್. ಅಶೋಕ್, ವಿಶೇಷ ಅಧಿವೇಶನ ಕರೆದಿರುವಾಗ ನಿಲುವಳಿ ಸೂಚನೆಯಡಿ ಚರ್ಚಿಸಲು ತೊಂದರೆಯೇನು ಎಂದು ಪ್ರಶ್ನಿಸಿದರು. ಇದೇ ವೇಳೆ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಚಿವ ಹೆಚ್.ಕೆ. ಪಾಟೀಲ್ ಪತ್ರ ಬರೆದು ಸರ್ಕಾರಕ್ಕೆ ಮಂಗಳಾರತಿ ಬೆಳಗಿದ್ದಾರೆ ಎಂದು ಟೀಕಿಸಿದರು. ಜೊತೆಗೆ ಸ್ಪೀಕರ್ ಅವರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಸ್ತುವಾರಿ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಬೆಳವಣಿಗೆಗಳಿಂದಾಗಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

Category
ಕರಾವಳಿ ತರಂಗಿಣಿ