image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನೀರಾವರಿ ಯೋಜನೆಗಳ ನಿರ್ಲಕ್ಷ್ಯ: ಅಧಿಕಾರಿಗಳಿಗೆ ಡಾ. ಸಿ.ಟಿ. ರವಿ ತರಾಟೆ

ನೀರಾವರಿ ಯೋಜನೆಗಳ ನಿರ್ಲಕ್ಷ್ಯ: ಅಧಿಕಾರಿಗಳಿಗೆ ಡಾ. ಸಿ.ಟಿ. ರವಿ ತರಾಟೆ

ಚಿಕ್ಕಮಗಳೂರು: ₹37.50 ಕೋಟಿ ವೆಚ್ಚದ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿರುವ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು, ಸ್ಥಗಿತಗೊಂಡಿರುವ ಯೋಜನೆಗಳಿಗೆ ಜೀವ ನೀಡಿ ತಕ್ಷಣವೇ ಕೆರೆಗಳಿಗೆ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸುಮಾರು ₹28 ಕೋಟಿ ವೆಚ್ಚದ ಬೈರಾಪುರ ಪಿಕಪ್‌ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸುವ ಯೋಜನೆಯ ಪಂಪ್‌ಹೌಸ್ ಹಾಗೂ ₹9.50 ಕೋಟಿ ವೆಚ್ಚದ ಕರಗಡ ಏತ ನೀರಾವರಿ ಯೋಜನಾ ವ್ಯಾಪ್ತಿಗೆ ಡಾ. ರವಿ ಸಿ.ಟಿ. ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಲೋಪ, ಸ್ಥಗಿತಗೊಂಡ ಮೋಟಾರ್‌ಗಳು ಹಾಗೂ ಕಾಲುವೆಗಳಲ್ಲಿ ಗಿಡಗಂಟೆ ಬೆಳೆದು ಅಪಾರ ಪ್ರಮಾಣದ ಹೂಳು ತುಂಬಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ತೋರಿರುವ ಬೇಜವಾಬ್ದಾರಿತನದಿಂದಾಗಿ ಬರಗಾಲದ ಸಮಯದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ನೀರು ಸಿಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಳದಿಂದಲೇ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.

ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಪಡಿಸಿ, ಮೋಟಾರ್‌ಗಳನ್ನು ಚಾಲನೆಗೊಳಿಸಬೇಕು ಹಾಗೂ ಕಾಲುವೆಗಳ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ವಿಶೇಷವಾಗಿ ಕಳಸಾಪುರ ಊರಮುಂದಿನ ಕೆರೆ, ತಿಮ್ಮಪ್ಪನ ಕೆರೆ ಹಾಗೂ ಈಶ್ವರಹಳ್ಳಿ ಕೆರೆಗಳಿಗೆ ಯಾವುದೇ ಅಡಚಣೆಯಿಲ್ಲದೆ ತಕ್ಷಣ ನೀರು ತಲುಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Category
ಕರಾವಳಿ ತರಂಗಿಣಿ