ಬೆಂಗಳೂರು : ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸಲು ಅಗತ್ಯ ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿಯೊಂದರ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, ಒಬ್ಬ ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಸರ್ಕಾರಕ್ಕೆ ಇಷ್ಟೊಂದು ತಕರಾರು ಏಕೆ ಎಂದು ಮೌಖಿಕವಾಗಿ ಪ್ರಶ್ನಿಸಿತು. ತನಿಖೆಗೆ ಅನುಮತಿ ನೀಡದಿರಲು ಕಾರಣವನ್ನಾದರೂ ನೀಡಬೇಕು, ಆದರೆ ಈ ರೀತಿ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಪ್ರಕರಣ ದಾಖಲಿಸಲು ಸ್ವತಃ ಲೋಕಾಯುಕ್ತ ಸಂಸ್ಥೆಯೇ ಅನುಮತಿ ಕೇಳುತ್ತಿದ್ದರೂ ಇಷ್ಟೊಂದು ವಿರೋಧವೇಕೆ ಎಂದು ಖಾರವಾಗಿ ಪ್ರಶ್ನಿಸಿದ ಕೋರ್ಟ್, "ಹಾಗಿದ್ದರೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಬಿಡಿ" ಎಂದು ಅತ್ಯಂತ ತೀವ್ರವಾಗಿ ಚಾಟಿ ಬೀಸಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಸಂಬಂಧಿಸಿದ ಕಡತವು ಮುಖ್ಯಮಂತ್ರಿಗಳ ಕಚೇರಿಯಲ್ಲಿದೆ ಎಂದು ಕೋರ್ಟ್‌ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಡತ ಏಕೆ ಮುಖ್ಯಮಂತ್ರಿಗಳ ಕಚೇರಿಯಲ್ಲಿದೆ ಎಂದು ಪ್ರಶ್ನಿಸಿ, ಆರೋಪಿ ಪ್ರಹ್ಲಾದ್ ಕಮ್ಮಾರ್ ವಿರುದ್ಧ ತನಿಖೆಗೆ ಅನುಮತಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು. ನಂತರ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.
ಇನ್ನೊಂದೆಡೆ, ಸರ್ಕಾರಿ ನೌಕರರ ವಿರುದ್ಧ ಅಧಿಕೃತ ಆರೋಪಪಟ್ಟಿ ಸಲ್ಲಿಕೆಯಾಗದೆ, ಕೇವಲ ದೂರು ಅಥವಾ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಬಡ್ತಿ ತಡೆಹಿಡಿಯುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ದೂರು ಅಥವಾ ಪೊಲೀಸ್ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಬಡ್ತಿ ನಿರಾಕರಿಸುವುದು ಸೇವಾ ನಿಯಮಗಳಿಗೆ ವಿರುದ್ಧ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರರಿಗೆ 8 ವಾರಗಳೊಳಗೆ ಮುಂಬಡ್ತಿ ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದೆ.