ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಸಿಡಿಸಿಸಿ) 2025–26ನೇ ಸಾಲಿನಲ್ಲಿ ₹6.87 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 98.5ರಷ್ಟು ಸಾಲ ವಸೂಲಾತಿ ಸಾಧನೆಯೊಂದಿಗೆ ರಾಜ್ಯದ 21 ಡಿಸಿಸಿ ಬ್ಯಾಂಕುಗಳಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದ್ದಾರೆ.
ನಗರದ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆರ್ಥಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 1955ರಲ್ಲಿ ಕೇವಲ ₹1,430 ಠೇವಣಿಯೊಂದಿಗೆ ಆರಂಭಗೊಂಡ ಬ್ಯಾಂಕ್ ಇಂದು 28 ಶಾಖೆಗಳು ಹಾಗೂ 396 ಸದಸ್ಯ ಸಹಕಾರ ಸಂಘಗಳ ಬೃಹತ್ ಜಾಲವಾಗಿ ಬೆಳೆದಿದೆ. ನಬಾರ್ಡ್ ತಪಾಸಣೆಯಲ್ಲಿ ನಿರಂತರವಾಗಿ ‘ಎ’ ಗ್ರೇಡ್ ಪಡೆಯುತ್ತಿರುವ ಬ್ಯಾಂಕ್, ಪ್ರಸ್ತುತ 2.24 ಲಕ್ಷ ಠೇವಣಿದಾರರಿಂದ ₹1,568.83 ಕೋಟಿ ಠೇವಣಿ ಹೊಂದಿದ್ದು, ₹3,000 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ.
ಕಳೆದ ಸಾಲಿನಲ್ಲಿ 54,992 ರೈತರಿಗೆ ₹843.84 ಕೋಟಿ ಶೂನ್ಯ ಬಡ್ಡಿದರದ ಬೆಳೆ ಸಾಲ ನೀಡಲಾಗಿದ್ದು, ಕೃಷಿಯೇತರ ಉದ್ದೇಶಗಳಿಗೆ ₹569.57 ಕೋಟಿ ಸಾಲ ಒದಗಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಎನ್‌ಪಿಎ ಪ್ರಮಾಣ ಶೇ. 3.5ರಷ್ಟಿದೆ. ಗ್ರಾಹಕರಿಗೆ ಯುಪಿಐ, ಫೋನ್‌ಪೇ, ಗೂಗಲ್ ಪೇ ಹಾಗೂ ಮೈಕ್ರೋ ಎಟಿಎಂ ನಂತಹ ಆಧುನಿಕ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಅಳವಡಿಸಲಾಗಿದೆ.
ಬ್ಯಾಂಕ್ ವಿಸ್ತರಣೆಯ ಭಾಗವಾಗಿ ಲಿಂಗದಳ್ಳಿ, ಮಲ್ಲಂದೂರು, ಎಂ.ಸಿ.ಹಳ್ಳಿ, ಚೌಲುಹಿರಿಯೂರು ಹಾಗೂ ಗವನಹಳ್ಳಿ ಭಾಗಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲು ಪ್ರಾಥಮಿಕ ಸಮೀಕ್ಷೆಗೆ ಸೂಚಿಸಲಾಗಿದೆ. ಸಮೀಕ್ಷೆಯ ವರದಿ ಆಧರಿಸಿ ಆರ್‌ಬಿಐ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ನಬಾರ್ಡ್ ಮರುಹಣಕಾಸು ನೆರವು ₹450 ಕೋಟಿಯಿಂದ ₹180 ಕೋಟಿಗೆ ಇಳಿಕೆಯಾಗಿದ್ದು, ಸರ್ಕಾರದಿಂದ ಬರಬೇಕಾದ ಬಾಕಿ ₹25 ಕೋಟಿ ಬಡ್ಡಿ ಸಹಾಯಧನವನ್ನು ನಿಯಮಿತವಾಗಿ ಬಿಡುಗಡೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.