image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಮಯ ಮೀರಿದರೆ ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಕೆ. ಎಂ. ಶಿವಲಿಂಗೇಗೌಡ ಎಚ್ಚರಿಕೆ

ಸಮಯ ಮೀರಿದರೆ ಮದ್ಯದಂಗಡಿಗಳ ವಿರುದ್ಧ ಕಠಿಣ ಕ್ರಮ: ಸಚಿವ ಕೆ. ಎಂ. ಶಿವಲಿಂಗೇಗೌಡ ಎಚ್ಚರಿಕೆ

ಬೆಂಗಳೂರು : ಅಬಕಾರಿ ಇಲಾಖೆಯ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಇಲಾಖೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದ್ದು, ನಿಗದಿತ ಸಮಯಕ್ಕಿಂತ ಮೊದಲೇ ಮದ್ಯದಂಗಡಿಗಳನ್ನು ತೆರೆಯುವ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಂಗಳೂರಿನ ಜಿಲ್ಲಾ ಪಂಚಾಯತ್ ಕಾರ್ಯಾಲಯದ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಂಗಳೂರು ವಿಭಾಗ ವ್ಯಾಪ್ತಿಯ ಅಬಕಾರಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಮಯ ಪರಿಪಾಲನೆ ಮಾಡದೆ ಮದ್ಯ ಮಾರಾಟ ಮಾಡುವುದರಿಂದ ಸಾರ್ವಜನಿಕರು ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಎಚ್ಚರಿಸಿದರು.

ಇಲಾಖೆಗೆ ಸುಸಜ್ಜಿತ ಹಾಗೂ ಪ್ರತ್ಯೇಕ 'ಅಬಕಾರಿ ಭವನ'ಗಳ ನಿರ್ಮಾಣದ ಅಗತ್ಯತೆಯನ್ನು ಪ್ರತಿಪಾದಿಸಿದ ಸಚಿವರು, ನಿರ್ದಿಷ್ಟ ವಿನ್ಯಾಸದಲ್ಲಿ ಕಟ್ಟಡ ನಿರ್ಮಿಸಲು ಯೋಜನಾ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸರ್ಕಾರದ ಅವಧಿ ಮುಗಿಯುವುದರೊಳಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಬಕಾರಿ ಭವನಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ, ಮಿಲಿಟರಿ ಕೋಟಾದಡಿ ಸಿಗುವ ಮದ್ಯವು ಅಕ್ರಮ ವ್ಯಾಪಾರಕ್ಕೆ ದುರ್ಬಳಕೆಯಾಗುತ್ತಿರುವುದನ್ನು ತಡೆಯಬೇಕು ಹಾಗೂ ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವ ಅಕ್ರಮ ಮದ್ಯಕ್ಕೆ ತಡೆಹಾಕಲು ಚೆಕ್ ಪೋಸ್ಟ್ ನಿರ್ಮಿಸಬೇಕು ಎಂದು ತಿಳಿಸಿದರು. ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇಲಾಖೆಗೆ ಉತ್ತಮ ಹೆಸರು ತರುವಂತೆ ಸಿಬ್ಬಂದಿಗೆ ಅಭಯ ನೀಡಿದ ಅವರು, ನೂತನ ಸಿಬ್ಬಂದಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದರು. ಒಳಮೀಸಲಾತಿಯ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲಾಗಿದ್ದು, ಪೂರಕ ನಿರ್ಧಾರ ಕೈಗೊಳ್ಳಲು ಅಬಕಾರಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ