image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

₹1,400 ಬಂಡವಾಳದಿಂದ ₹3,000 ಕೋಟಿ ವಹಿವಾಟಿನತ್ತ ಡಿಸಿಸಿ ಬ್ಯಾಂಕ್: ಡಾ. ಸಿ.ಟಿ. ರವಿ

₹1,400 ಬಂಡವಾಳದಿಂದ ₹3,000 ಕೋಟಿ ವಹಿವಾಟಿನತ್ತ ಡಿಸಿಸಿ ಬ್ಯಾಂಕ್: ಡಾ. ಸಿ.ಟಿ. ರವಿ

ಚಿಕ್ಕಮಗಳೂರು: 1955ರಲ್ಲಿ ಕೇವಲ ₹1,400 ಬಂಡವಾಳದೊಂದಿಗೆ ಆರಂಭಗೊಂಡ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್) ಇಂದು ₹3,000 ಕೋಟಿಗೂ ಅಧಿಕ ವಾರ್ಷಿಕ ವಹಿವಾಟು ನಡೆಸುವ ಹಾಗೂ ₹1,500 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿರುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಡಾ. ಸಿ.ಟಿ. ರವಿ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಆರಂಭಿಕ ಹಂತದಿಂದ ಬೆಳೆದು ಬಂದಿರುವ ಬ್ಯಾಂಕ್ ಇಂದು ₹850 ಕೋಟಿಗೂ ಅಧಿಕ ಕೃಷಿ ಸಾಲ ನೀಡುವ ಮಟ್ಟಕ್ಕೆ ತಲುಪಿದೆ. ಕಳೆದ 12 ವರ್ಷಗಳಿಂದ ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್, ನಬಾರ್ಡ್‌ನ ಮೇಲ್ವಿಚಾರಣೆಯಲ್ಲಿಯೂ ಸತತವಾಗಿ ‘ಎ’ ಗ್ರೇಡ್‌ ಮಾನ್ಯತೆ ಪಡೆದುಕೊಂಡಿದೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಸದಸ್ಯರು ಹಾಗೂ ಸಹಕಾರ ಸಂಘಗಳ ಸಹಕಾರದೊಂದಿಗೆ ಬ್ಯಾಂಕ್‌ನ್ನು ಇನ್ನಷ್ಟು ಬಲಿಷ್ಠವಾಗಿ ಮುನ್ನಡೆಸಲಾಗುವುದು ಎಂದರು. ಜಿಲ್ಲೆಯ ಸಹಕಾರ ಸಂಘಗಳು ಹಾಗೂ ಸಂಬಂಧಿತ ಸಂಸ್ಥೆಗಳು ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚಿನ ಠೇವಣಿ ಇಡುವ ಮೂಲಕ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಆಡಳಿತ ಮಂಡಳಿಯು ಬ್ಯಾಂಕ್ ಅನ್ನು ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಸ್ಥೆಯ ಮತ್ತು ಸದಸ್ಯರ ಹಿತದೃಷ್ಟಿಯಿಂದ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಮಹಾಸಭೆಯಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು. ಜೊತೆಗೆ ಸಹಕಾರ ಕ್ಷೇತ್ರದ ಸಮಸ್ಯೆಗಳಿಗೆ ವಿಧಾನಸಭೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಕೆ. ದಿನೇಶ್ ಹೊಸೂರು, ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಡಿ.ಎಸ್. ಸುರೇಶ್, ನಿಕಟಪೂರ್ವ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೆಳ್ಳಿ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಕೆ.ಆರ್. ಆನಂದಪ್ಪ, ಹೆಚ್.ಬಿ. ಶಿವಣ್ಣ, ಟಿ.ಎಲ್. ರಮೇಶ್, ದಿನೇಶ್ ಹೆಗ್ಗಡೆ, ಎಸ್.ವಿ. ಬಸವರಾಜಪ್ಪ, ಬಿ.ಎಸ್. ಸತೀಶ್, ಎಸ್.ಡಿ. ಸೋನಾಲ್, ಜಯಪಾಲ್ ಕೆ.ಸಿ., ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಪ್ರವೀಣ್ ನಾಯಕ್ ಸೇರಿದಂತೆ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ