ಗಂಗಾವತಿ: ಇಲ್ಲಿ ಇತ್ತೀಚೆಗೆ ನಡೆದ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ 'ವಂದೇ ಮಾತರಂ' ಗೀತೆಯನ್ನು ಪೂರ್ತಿಯಾಗಿ ಹಾಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ದನ ರೆಡ್ಡಿ ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪೂರ್ಣ ಗೀತೆಯನ್ನು ಹಾಡಿಸಬಾರದಿತ್ತು. ಇದು ಸರ್ಕಾರದ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನಿಯಮ ರೂಪಿಸುವಾಗ ಸರ್ಕಾರ ಎಲ್ಲಾ ಅಂಶಗಳನ್ನು ಪರಿಶೀಲಿಸಿರುತ್ತದೆ, ಅದನ್ನು ಅಧಿಕಾರಿಗಳು ಪಾಲಿಸಬೇಕು. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಹಾಡಿದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ತಂಗಡಗಿ, ಬಿಜೆಪಿಯವರಿಗೆ ಗೀತೆಯ ಮಹತ್ವ ಹಾಗೂ ಅರ್ಥವೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನೊಂದೆಡೆ, ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲೇ ಹಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ರಾಜ್ಯ ಸರ್ಕಾರದ ಈ ನಡೆ ಕೇಂದ್ರ ಸರ್ಕಾರದ ಆದೇಶಗಳಿಗೆ ವಿರುದ್ಧವಾಗಿದ್ದು, ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಈ ವಿಷಯವಾಗಿ ಕೇಂದ್ರ ಸರ್ಕಾರ, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.