ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಹಾಗೂ ಮಲೆನಾಡು-ಕರಾವಳಿ ಭಾಗದ ರಸ್ತೆ ಅಭಿವೃದ್ಧಿಗೆ ಪ್ರತಿವರ್ಷ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ “ಕಾಫಿ ಅಂಡ್ ಸ್ಪೈಸಸ್ ಎಕ್ಸ್‌ಪೋ - 2026” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಲೆನಾಡು ಭಾಗದಲ್ಲಿ ಸುರಿಯುವ ಭಾರಿ ಮಳೆಯಿಂದಾಗಿ ಕೆ.ಆರ್.ಎಸ್., ಹೇಮಾವತಿ ಹಾಗೂ ತುಂಗಭದ್ರ ಜಲಾಶಯಗಳು ಭರ್ತಿಯಾಗುತ್ತವೆ. ಆದರೆ, ಇದೇ ಮಳೆಯಿಂದಾಗಿ ಸ್ಥಳೀಯ ರಸ್ತೆಗಳು ಪದೇಪದೇ ಹಾಳಾಗುತ್ತಿದ್ದು, ಈ ಭಾಗಕ್ಕೆ ವಿಶೇಷ ರಸ್ತೆ ಪ್ಯಾಕೇಜ್ ನಿಡುವುದು ಅಗತ್ಯವಾಗಿದೆ ಎಂದರು.
ಜೊತೆಗೆ, ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಗಳಲ್ಲಿ ಕಳಪೆತನ ಮತ್ತು ಅವ್ಯವಹಾರದ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (SIT) ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಸ್ತೂರಿರಂಗನ್ ವರದಿ ಅನುಷ್ಠಾನದ ವಿಚಾರದಲ್ಲಿ ಜನಜೀವನ ಹಾಗೂ ಪರಿಸರ ಎರಡನ್ನೂ ರಕ್ಷಿಸುವ ಮಧ್ಯಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ ಹಾಗೂ ಬೆಲೆ ಅಸ್ಥಿರತೆಯಂತಹ ಸವಾಲುಗಳಿಗೆ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳೇ ಪರಿಹಾರ. ತೋಟಗಳಲ್ಲಿ ಬಾಂಗ್ಲಾದೇಶದ ಕಾರ್ಮಿಕರನ್ನು ಬಳಸುವುದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ. ಆದ್ದರಿಂದ ತಂತ್ರಜ್ಞಾನದ ಬಳಕೆ ಹೆಚ್ಚಿಸಬೇಕು ಅಥವಾ ಅಧಿಕೃತ ವರ್ಕಿಂಗ್ ವೀಸಾ ಮೂಲಕ ಕಾರ್ಮಿಕರನ್ನು ಪಡೆಯುವ ವ್ಯವಸ್ಥೆಯಾಗಬೇಕು ಎಂದು ಎಚ್ಚರಿಸಿದರು. ಅಲ್ಲದೆ, ಭಾರತೀಯ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡಿಂಗ್ ಹಾಗೂ ಮೌಲ್ಯವರ್ಧನೆ ಒದಗಿಸುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ಕಾಫಿ ಮಂಡಳಿಯ ಸಕ್ರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.