ಬೆಂಗಳೂರು: ಕರ್ನಾಟಕದಾದ್ಯಂತ ಕಾನೂನು ಮಾಪನಶಾಸ್ತ್ರ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಶೇಕಡಾ 95ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ನಿಖರ ಪ್ರಮಾಣದಲ್ಲಿ ಇಂಧನ ಪೂರೈಕೆಯಾಗದಿರುವುದು ಪತ್ತೆಯಾಗಿದೆ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಒಟ್ಟು 5,946 ಪೆಟ್ರೋಲ್ ಬಂಕ್‌ಗಳ ಪೈಕಿ ಕಳೆದ ಒಂದು ವಾರದಲ್ಲಿ 805 ಬಂಕ್‌ಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ 768 ಬಂಕ್‌ಗಳಲ್ಲಿ ಇಂಧನ ಪ್ರಮಾಣದಲ್ಲಿ ಕೊರತೆ ಕಂಡುಬಂದಿದೆ ಎಂದರು.
ತಪಾಸಣೆ ವೇಳೆ ಗಂಭೀರ ನಿಯಮ ಉಲ್ಲಂಘನೆ ಎಸಗಿದ 101 ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 6.66 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಪರಿಶೀಲನೆಗೆ ಒಳಪಟ್ಟ 3,071 ನೋಸಲ್ (ಪೆಟ್ರೋಲ್ ಗನ್)ಗಳ ಪೈಕಿ 2,618 ನೋಸಲ್, ಅಂದರೆ ಶೇ. 85 ರಷ್ಟು ಗನ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಕಡಿಮೆಯಿರುವುದು ಸಾಬೀತಾಗಿದೆ. ಕೇಂದ್ರ ಸರ್ಕಾರದ ನಿಯಮದಂತೆ 5 ಲೀಟರ್ ಇಂಧನಕ್ಕೆ ಗರಿಷ್ಠ 25 ಎಂಎಲ್ ವ್ಯತ್ಯಾಸಕ್ಕೆ ಅವಕಾಶವಿದ್ದರೂ, ಹಲವು ಬಂಕ್‌ಗಳಲ್ಲಿ 60 ರಿಂದ 100 ಎಂಎಲ್‌ನಷ್ಟು ಕೊರತೆ ಪತ್ತೆಯಾಗಿದೆ.
ಪೆಟ್ರೋಲ್ ಬಂಕ್‌ಗಳ ತಪಾಸಣಾ ಅವಧಿಯನ್ನು 12 ತಿಂಗಳಿನಿಂದ 24 ತಿಂಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ತಿರಸ್ಕರಿಸಲಿದೆ ಎಂದು ಸಚಿವರು ತಿಳಿಸಿದರು. ವರ್ಷಕ್ಕೊಮ್ಮೆ ಪರಿಶೀಲನೆ ನಡೆಸುವಾಗಲೇ ಇಷ್ಟೊಂದು ವ್ಯತ್ಯಾಸಗಳಿರುವಾಗ, 2 ವರ್ಷಕ್ಕೊಮ್ಮೆ ತಪಾಸಣೆ ನಡೆಸಿದರೆ ಗ್ರಾಹಕರಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆಯುವುದಾಗಿ ತಿಳಿಸಿದ ಅವರು, ಸಾರ್ವಜನಿಕರು ಇಂಧನ ವ್ಯತ್ಯಾಸ ಕಂಡುಬಂದರೆ ದೂರು ನೀಡಲು 18005991100 ಟೋಲ್ ಫ್ರೀ ಸಂಖ್ಯೆಯನ್ನು ಬಳಸಬಹುದು ಮತ್ತು ಪ್ರತಿಯೊಂದು ಬಂಕ್‌ನಲ್ಲೂ 5 ಲೀಟರ್ ಅಳತೆಯ ಕ್ಯಾನ್ ಲಭ್ಯವಿರಬೇಕು ಎಂದು ಸ್ಪಷ್ಟಪಡಿಸಿದರು.