image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ

ಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ

ಬೆಂಗಳೂರು : ​ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬ್ಯಾಂಕರ್‌ಗಳ ರಾಜ್ಯ ಮಟ್ಟದ ಸಮಿತಿ (SLBC) ಧಾವಿಸಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ವಿಶೇಷ ಪರಿಹಾರ ಯೋಜನೆಯನ್ನು ಪ್ರಕಟಿಸಿದ್ದು, ಸಾಲ ಮರುಪಾವತಿಗೆ 12 ತಿಂಗಳ ಮೊರಟೋರಿಯಂ ನೀಡುವ ಜೊತೆಗೆ ಒಟ್ಟು ಮರುಪಾವತಿ ಅವಧಿಯನ್ನು ವಿಸ್ತರಿಸಿ ಮಹತ್ವದ ನಿರ್ಧಾರ ಕೈಗೊಂಡಿವೆ.  

​ಸರ್ಕಾರದ ವರ್ಗೀಕರಣದಂತೆ 89 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (KCC), ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿದಂತೆ ಎಲ್ಲಾ ಕೃಷಿ ಸಂಬಂಧಿತ ಸಾಲಗಳಿಗೆ ಈ ಸೌಲಭ್ಯ ಅನ್ವಯಿಸಲಿದೆ. ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ (3 ವರ್ಷ) ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ (5 ವರ್ಷ) ವಿಸ್ತರಿಸಲಾಗಿದೆ.  
​ಹಳೆಯ ಸಾಲಗಳ ಮರುಪಾವತಿಯನ್ನು ಮುಂದೂಡುವುದಷ್ಟೇ ಅಲ್ಲದೆ, ರೈತರ ತುರ್ತು ಅಗತ್ಯಗಳಿಗಾಗಿ ನಿಯಮಾವಳಿಗಳಂತೆ ಬ್ಯಾಂಕುಗಳು ಹೊಸ ಸಾಲ ಸೌಲಭ್ಯವನ್ನೂ ಒದಗಿಸಲಿವೆ. ಮುಂದೆ ಯಾವುದೇ ಹೊಸ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದರೂ ಪ್ರತ್ಯೇಕ ಎಸ್‌ಎಲ್‌ಬಿಸಿ ಸಭೆಯ ಅಗತ್ಯವಿಲ್ಲದೇ ಈ ಪರಿಹಾರ ಚೌಕಟ್ಟು ಸ್ವಯಂಚಾಲಿತವಾಗಿ ಅನ್ವಯವಾಗಲಿದೆ. ಪರಿಹಾರ ಯೋಜನೆಯನ್ನು 2026ರ ಅಕ್ಟೋಬರ್ 11 ರೊಳಗೆ ಜಾರಿಗೆ ತರಲಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು 2027ರ ಜನವರಿ 09 ರೊಳಗೆ ಪೂರ್ಣಗೊಳಿಸಲು ಬ್ಯಾಂಕುಗಳಿಗೆ ಗಡುವು ನೀಡಲಾಗಿದೆ.  

ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿ ಮಾಡದಂತೆ ಕಟ್ಟುನಿಟ್ಟಿನ 'ಝೀರೋ ಟಾಲರೆನ್ಸ್' ನೀತಿಯನ್ನು ಜಾರಿಗೆ ತರಲಾಗಿದ್ದು, ರೈತರ ದೂರುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಲಿದೆ. ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರಿಗೆ ಈ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಸಹಕಾರ ವಲಯದ ಸಾಲಗಳ ಮರುಪಾವತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ನಬಾರ್ಡ್ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

Category
ಕರಾವಳಿ ತರಂಗಿಣಿ