image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಲ್ಯಾಣ ಕರ್ನಾಟಕದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯ: ಡಾ. ಶಾಲಿನಿ ರಜನೀಶ್

ಕಲ್ಯಾಣ ಕರ್ನಾಟಕದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯ: ಡಾ. ಶಾಲಿನಿ ರಜನೀಶ್

ಮಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶವು ವೈವಿಧ್ಯಮಯ ಇತಿಹಾಸ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ನೈಸರ್ಗಿಕ ಸೌಂದರ್ಯದಿಂದ ಕೂಡಿದ್ದು, ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ದಿನದ 78ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಕಟಣೆ ನೀಡಿರುವ ಅವರು, ಈ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸಿ ಸಾಧ್ಯತೆಗಳನ್ನು ಹಂಚಿಕೊಂಡಿದ್ದಾರೆ.

ಈ ಪ್ರದೇಶವು 7000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ರಾಮಾಯಣ ಕಾಲದ ಸ್ಮೃತಿಗಳನ್ನು ಹೊತ್ತ ಕಿಷ್ಕಂಧೆಯ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಹಾಗೂ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿ ಪ್ರಮುಖ ಆಕರ್ಷಣೆಗಳಾಗಿವೆ. ಅಲ್ಲದೆ, ಹಿರೇಬೆನಕಲ್‌ನ 3000 ವರ್ಷ ಹಳೆಯ ಶಿಲಾಸಮಾಧಿಗಳು, ಮಸ್ಕಿ ಹಾಗೂ ಬಳ್ಳಾರಿಯ ಸಂಗನಕಲ್ಲು ಸೇರಿದಂತೆ ಆದಿಮಾನವರ ಅಪರೂಪದ ನೆಲೆಗಳು ಈ ಭಾಗದಲ್ಲಿವೆ. ಪ್ರಾಚೀನ ಬೌದ್ಧ ಧರ್ಮದ ಪ್ರಸಾರಕ್ಕೆ ಸಾಕ್ಷಿಯಾಗಿರುವ ಸನ್ನತಿಯ ಕಂಗನಹಳ್ಳಿ ಸ್ತೂಪ, ಚಾಲುಕ್ಯರ ವಾಸ್ತುಶಿಲ್ಪ ವೈಭವ ಸಾರುವ ಪಟ್ಟದಕಲ್ಲು, ಐಹೊಳೆ, ಬಾದಾಮಿಯ ಗುಹಾ ದೇವಾಲಯಗಳು ಹಾಗೂ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಲಖೇಡ ಕೋಟೆ ಈ ಭಾಗದ ವೈಭವವನ್ನು ಸಾರುತ್ತವೆ.

ಶಿಕ್ಷಣ ಕ್ಷೇತ್ರದಲ್ಲೂ ಈ ಭಾಗವು ಮಹತ್ವದ ಕೊಡುಗೆ ನೀಡಿದ್ದು, 'ದಕ್ಷಿಣದ ತಕ್ಷಶಿಲೆ' ಎಂದೇ ಪ್ರಸಿದ್ಧವಾಗಿದ್ದ ಚಿತ್ತಾಪುರ ಸಮೀಪದ ನಾಗಾವಿಯ ಘಟಿಕಾಸ್ಥಾನವು ರಾಷ್ಟ್ರಕೂಟರ ಕಾಲದಲ್ಲಿ ಪ್ರಮುಖ ವಿದ್ಯಾಕೇಂದ್ರವಾಗಿತ್ತು. ಶಹಾಪುರದ ನೈಸರ್ಗಿಕ ಮಲಗಿದ ಬುದ್ಧನ ಆಕೃತಿಯ ಬೆಟ್ಟ, ಯಾದಗಿರಿಯ ಬೋನಾಳ ಪಕ್ಷಿಧಾಮ ಹಾಗೂ ಸುರಪುರದ ಬೆಟ್ಟಗಳ ವಿಸ್ಮಯಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಇದರೊಂದಿಗೆ ಬೀದರ್ ಕೋಟೆ, ಮಹಮೂದ್ ಗವಾನ್ ಮದರಸಾ, ಕಲಬುರಗಿ ಕೋಟೆ, ವಿಜಯಪುರದ ವಿಶ್ವಪ್ರಸಿದ್ಧ ಗೋಲಗುಂಬಜ್, ಜುಮ್ಮಾ ಮಸೀದಿ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾಗಳು ಇಸ್ಲಾಮಿಕ್ ವಾಸ್ತುಶಿಲ್ಪ ಮತ್ತು ಸೂಫಿ ಪರಂಪರೆಯ ವೈಭವವನ್ನು ಬಿಂಬಿಸುತ್ತವೆ.

12ನೇ ಶತಮಾನದಲ್ಲೇ ಲೋಕತಂತ್ರ ಹಾಗೂ ಸಾಮಾಜಿಕ ಸಮಾನತೆಯ ಬುನಾದಿ ಹಾಕಿದ ಜಗಜ್ಯೋತಿ ಬಸವೇಶ್ವರರ ಅನುಭವ ಮಂಟಪ, 18ನೇ ಶತಮಾನದ ಶ್ರೀ ಶರಣಬಸವೇಶ್ವರ ದೇವಾಲಯ, ಬೀದರ್‌ನ ಅಪರೂಪದ ನರಸಿಂಹ ಝರಾ ಗುಹಾಂತರ ದೇವಾಲಯ ಮತ್ತು ಬ್ರಿಟಿಷ್ ಕಾಲದ ವಿಶಿಷ್ಟ ತಂತ್ರಜ್ಞಾನದ ಟೈಲರ್ ಮಂಜಿಲ್ ಈ ಭಾಗದ ಹೆಮ್ಮೆಯ ಸಂಕೇತಗಳಾಗಿವೆ. ಪ್ರತಿಯೊಬ್ಬರೂ ಈ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ, ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಶ್ರೀಮಂತಿಕೆಯನ್ನು ಅನುಭವಿಸುವುದರ ಜೊತೆಗೆ ಪ್ರವಾಸೋದ್ಯಮದ ಮೂಲಕ ಕಲ್ಯಾಣ ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಡಾ. ಶಾಲಿನಿ ರಜನೀಶ್ ಕರೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ