ಬೆಂಗಳೂರು : ಬೆಂಗಳೂರಿನಲ್ಲಿ ಶೀಘ್ರವೇ ಲೋಕಾರ್ಪಣೆಗೊಳ್ಳಲಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Pink Line) ತಾವರೆಕೆರೆ ನಿಲ್ದಾಣಕ್ಕೆ 'ಬಿಸ್ಮಿಲ್ಲಾ ನಗರ' ಅಥವಾ 'ಬಿಸ್ಮಿಲ್ಲಾ ನಗರ-ತಾವರೆಕೆರೆ' ಎಂದು ಮರುನಾಮಕರಣ ಮಾಡಬೇಕೆಂಬ ಹೊಸ ಬೇಡಿಕೆಯೊಂದು ಮುನ್ನೆಲೆಗೆ ಬಂದಿದೆ.
ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ಈ ಮಾರ್ಗದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಬಿಸ್ಮಿಲ್ಲಾ ನಗರದ ಸ್ಥಳೀಯ ಮುಸ್ಲಿಂ ನಿವಾಸಿಗಳು ಹಾಗೂ ಪ್ರಮುಖ ಮುಖಂಡರು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್ ಅವರನ್ನು ಖುದ್ದು ಭೇಟಿಯಾಗಿ ಔಪಚಾರಿಕ ಮನವಿ ಪತ್ರ ಸಲ್ಲಿಸಿದ್ದಾರೆ.
ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸ್ಮಿಲ್ಲಾ ನಗರವೇ ಪ್ರಮುಖವಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ನಿವಾಸಿಗಳಿದ್ದಾರೆ. ಪ್ರತಿದಿನ ಸಾವಿರಾರು ಸ್ಥಳೀಯರು ಈ ನಿಲ್ದಾಣವನ್ನೇ ಅವಲಂಬಿಸುವುದರಿಂದ ಸುಲಭ ಗುರುತಿಸುವಿಕೆಗಾಗಿ 'ಬಿಸ್ಮಿಲ್ಲಾ ನಗರ' ಅಥವಾ 'ಬಿಸ್ಮಿಲ್ಲಾ ನಗರ-ತಾವರೆಕೆರೆ' ಎಂದು ಜಂಟಿ ಹೆಸರಿಡಬೇಕೆಂದು ನಿಯೋಗವು ಒತ್ತಾಯಿಸಿದೆ.
ಉದ್ಘಾಟನೆಯ ಹೊಸ್ತಿಲಲ್ಲೇ ನಿಲ್ದಾಣದ ಮರುನಾಮಕರಣದ ವಿಚಾರ ಮುನ್ನೆಲೆಗೆ ಬಂದಿರುವುದು ಸಾರ್ವಜನಿಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಈ ಮನವಿಗೆ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.