ಬೆಂಗಳೂರು : ನಮ್ಮದೇ ದೇಶದಲ್ಲಿ, ನಮ್ಮದೇ ನೆಲದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಹಿಂದೂಗಳು ಗೋಗರೆಯಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂದರೆ ಇದಕ್ಕಿಂತ ದುರ್ದೈವದ ಸಂಗತಿ ಇನ್ನೊಂದಿಲ್ಲ ಎಂದು ಹೇಳಿದ್ದಾರೆ. ಮೈಸೂರಿನ ಟಿ. ನರಸೀಪುರದ ಇನ್ಸ್‌ಪೆಕ್ಟರ್, ಗಣೇಶ ಸಮಿತಿಯ ಯುವಕರಿಗೆ ಸಾರ್ವಜನಿಕವಾಗಿ ಧಮ್ಕಿ ಹಾಕುವಷ್ಟು ಧೈರ್ಯ ನೀಡಿದವರು ಯಾರು? ಇದು ಪೊಲೀಸ್ ಇಲಾಖೆಗೆ ಗೃಹ ಸಚಿವರು ನೀಡಿದ ಅಧಿಕಾರವೋ ಅಥವಾ ಡಿ.ಕೆ. ಶಿವಕುಮಾರ್ ಅವರ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕಾರಣದ ಫರ್ಮಾನಾ ಎಂದು ಪ್ರಶ್ನಿಸಿದ್ದಾರೆ.
ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೇ ಒಂದು ಸಮುದಾಯದ ಏಜೆಂಟ್ ನಂತೆ ವರ್ತಿಸಿ, ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧ. ಭಕ್ತಿಭಾವದಿಂದ ಹಬ್ಬ ಆಚರಿಸಲು ಬಂದ ಯುವಕರಿಗೆ ಬೆದರಿಕೆ ಹಾಕಿರುವ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ನೆಪವೊಡ್ಡಿ ಹಿಂದೂ ಹಬ್ಬಗಳ ಆಚರಣೆಯನ್ನೇ ಹತೋಟಿ ಮಾಡಲು ಹೊರಟಿರುವುದು ಈ ಸರ್ಕಾರದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ. ನಮ್ಮ ಸನಾತನ ಸಂಸ್ಕೃತಿ, ಆಚರಣೆ ಹಾಗೂ ಭಕ್ತಿಭಾವದ ಮೇಲೆ ಧಕ್ಕೆ ತರಲು ಯತ್ನಿಸಿದರೆ ಅದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಬಾರಿಯ ಗಣೇಶೋತ್ಸವ ವೇಳೆ ಮಸೀದಿ ಮುಂದೆ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರುತ್ತೇವೆ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂದು ಯುವಕರಿಗೆ ಮೈಸೂರು ಜಿಲ್ಲೆ ಟಿ. ನರಸೀಪುರ ಠಾಣೆಯ ಇನ್ಸ್ಪೆಕ್ಟರ್ ಧನಂಜಯ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಿಂದೂ ಯುವಕರ ಜೊತೆಗೆ ಶಾಂತಿ ಸಭೆ ನಡೆಸಿದ ಇನ್ಸ್ಪೆಕ್ಟರ್ ಧನಂಜಯ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋಗಬೇಕು ಎನ್ನುವ ಆಗಿಲ್ಲ. ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು. ನಾವು ಹಾಕಿಕೊಡುವ ಮಾರ್ಗದಲ್ಲೇ ಹೋಗಬೇಕು. ಮಸೀದಿ ಮುಂದೆ ಹೋಗುವಂತಿಲ್ಲ, ನನ್ನ ಗಮನಕ್ಕೆ ಬಂದರೆ ಹೇಳಲ್ಲ, ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ನಿಮಗೆ ಯಾವ ಜಾಗ ಸೂಕ್ತವೋ ಅಲ್ಲೇ ಗಣೇಶನನ್ನು ಕೂರಿಸಿ. ಅದು ಯಾರು ಏನು ಮಾಡುತ್ತಾರೋ ನಾನು ನೋಡುತ್ತೇನೆ ಎಂದು ಹೇಳಿದ್ದಾರೆ. ಇನ್ಸ್ಪೆಕ್ಟರ್ ವೀರಾವೇಷದಿಂದ ಮಾತನಾಡಿದ್ದಾರೆ. ಇನ್ಸ್ ಪೆಕ್ಟರ್ ಅವರೇ ಯಾರಿಗೆ ಧಮ್ಕಿ ಹಾಕ್ತೀರಾ? ಇನ್ನೊಂದು ಸಾರಿ ಆ ಮಾತನ್ನು ಆಡಿದರೆ ನಾನೇ ಪೊಲೀಸ್ ಠಾಣೆಗೆ ನುಗ್ಗುತ್ತೇನೆ. ನನ್ನ ಮುಂದೆ ನಿಮ್ಮ ಪೌರುಷ ತೋರಿಸಿ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಪೊಲೀಸ್ ಠಾಣೆಗೆ ನುಗ್ಗಿದ ನಂತರ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು. ಅಸ್ತಿತ್ವ ಕಳೆದುಕೊಂಡು ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ವ್ಯಕ್ತಿ ಎಂದು ಪ್ರತಾಪ ಸಿಂಹ ಅವರ ಹೆಸರು ಉಲ್ಲೇಖಿಸದೆ ವ್ಯಂಗ್ಯವಾಡಿದ್ದಾರೆ.
ಮೈಸೂರಿನ ಕಡೆಯ “ಪೇಟೆ ರೌಡಿ”ಯೊಬ್ಬ ಪೊಲೀಸರನ್ನು ಬೆದರಿಸುವ ಮಾತುಗಳನ್ನಾಡಿದ್ದಾನೆ. ಅಸ್ತಿತ್ವ ಕಳೆದುಕೊಂಡ ಕತ್ತಲೆ ಜಗತ್ತಿನ ಆತ್ಮದಂತೆ ಪರಿತಪಿಸುತ್ತಿರುವ ಆ ವ್ಯಕ್ತಿ ವಾರಕ್ಕೊಮ್ಮೆ ಗೋಗರೆದು ಮಾಧ್ಯಮಗಳನ್ನು ಕರೆಸಿಕೊಂಡು ಅಸಂಬದ್ಧ ಹೇಳಿಕೆ ನೀಡುತ್ತಾ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ.. “ಪೊಲೀಸ್ ಠಾಣೆಗೆ ನುಗ್ಗುತ್ತೇನೆ” ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ, ಪೊಲೀಸ್ ಠಾಣೆಗೆ ನುಗ್ಗಿದ ನಂತರ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಸನ್ನದ್ದವಾಗಿದೆ ಗೃಹ ಇಲಾಖೆ, ಸೂಕ್ಷ್ಮ ಸಂದರ್ಭಗಳನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯಲು ಬಿಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.