ಹುಬ್ಬಳ್ಳಿ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ, ಅನುಕೂಲ ಹಾಗೂ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬೆಂಗಳೂರು ವಿಭಾಗವು ಪ್ರಮುಖ ರೈಲು ನಿಲ್ದಾಣಗಳು ಮತ್ತು ವಿಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದೆ. ಹಬ್ಬದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆ ಹಾಗೂ ಜನಸಂದಣಿ ಹೆಚ್ಚಾಗುವ ಸಮಯಗಳಲ್ಲಿ ಪ್ಲಾಟ್‌ಫಾರ್ಮ್‌ಗಳು, ನಿಲ್ದಾಣದ ಆವರಣಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಹೆಚ್ಚುವರಿ ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜನಸಂದಣಿ ನಿರ್ವಹಣೆ, ಅತಿಯಾದ ಜನದಟ್ಟಣೆ ತಡೆಗಟ್ಟುವುದು ಮತ್ತು ಪ್ರಯಾಣಿಕರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆದ್ಯತೆ ನೀಡಲಾಗಿದೆ. ವಿಧ್ವಂಸಕ ಕೃತ್ಯಗಳ ತಡೆ ಹಾಗೂ ಸ್ಫೋಟಕಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರಮುಖ ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ಶ್ವಾನದಳವನ್ನು ನಿಯೋಜಿಸಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ಅಥವಾ ವಾರಸುದಾರರಿಲ್ಲದ ವಸ್ತುಗಳನ್ನು ಗುರುತಿಸಲು ಇತರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ನಿಯಮಿತ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ.
ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಜಾಲದ ಮೂಲಕ ಆರ್‌ಪಿಎಫ್ ಸಿಬ್ಬಂದಿ ನಿರಂತರ ನಿಗಾ ವಹಿಸುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ಮಾಲೀಕರಿಲ್ಲದ ಲಗೇಜ್‌ಗಳನ್ನು ತಕ್ಷಣವೇ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕಳ್ಳತನ, ಜೇಬು ಕಳ್ಳತನ, ಅನಧಿಕೃತ ಪ್ರವೇಶ ಹಾಗೂ ಇತರ ಅಪರಾಧಗಳ ವಿರುದ್ಧ ಜಾಗರೂಕರಾಗಿರಲು ಸಿಬ್ಬಂದಿಗೆ ಸೂಚಿಸಲಾಗಿದ್ದು, ರಾಜ್ಯ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ.
ಪ್ರಯಾಣಿಕರು ತಮ್ಮ ವೈಯಕ್ತಿಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಯಾವುದೇ ಲಗೇಜ್ ಅನ್ನು ನಿರ್ಲಕ್ಷ್ಯದಿಂದ ಬಿಟ್ಟು ಹೋಗಬಾರದು. ಅನುಮಾನಾಸ್ಪದ ಚಟುವಟಿಕೆ, ವಸ್ತು ಅಥವಾ ವ್ಯಕ್ತಿ ಕಂಡುಬಂದಲ್ಲಿ ತಕ್ಷಣವೇ ರೈಲ್ವೆ ಸಹಾಯವಾಣಿ ಸಂಖ್ಯೆ 139 ಕ್ಕೆ ಅಥವಾ ಹತ್ತಿರದ ಆರ್‌ಪಿಎಫ್/ಜಿಆರ್‌ಪಿ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ.ಎನ್. ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.