ಉಜಿರೆ : ಮೂಲತಃ ಬೆಳ್ತಂಗಡಿ ತಾಲೂಕಿನವರಾದ ಉಷಾರಾಣಿ ಅವರು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಉಚ್ಚನ್ಯಾಯಾಲಯದ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಐತಿಹಾಸಿಕ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಇಲ್ಲಿಯವರೆಗೆ ಮೈಸೂರಿನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರನ್ನು ಇದೀಗ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಯನ್ನಾಗಿ ಬಡ್ತಿ ನೀಡಿ ನೇಮಕ ಮಾಡಲಾಗಿದೆ.
ಉಷಾರಾಣಿ ಅವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಬೆಳ್ತಂಗಡಿಯಲ್ಲಿ ಪ್ರಸಿದ್ಧ ಹಿರಿಯ ವಕೀಲರು ಹಾಗೂ ಸಮಾಜಸೇವಾಕರ್ತರಾಗಿ ಚಿರಪರಿಚಿತರಾಗಿದ್ದ ದಿವಂಗತ ನೇಮಿರಾಜ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆಗೆ ಬೆಳ್ತಂಗಡಿ ಹಾಗೂ ಉಜಿರೆ ಭಾಗದ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.