ಬೆಂಗಳೂರು: ರಾಜಕೀಯ ಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ನಗರದ ಅಭಿವೃದ್ಧಿಗಾಗಿ ಟನಲ್ ರಸ್ತೆ, ಬ್ಯುಸಿನೆಸ್ ಕಾರಿಡಾರ್ ಹಾಗೂ ಡಬಲ್ ಡೆಕ್ಕರ್ ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ಯೋಜನೆಗಳನ್ನು ತಮ್ಮ ಅವಧಿಯಲ್ಲೇ ಪ್ರಾರಂಭಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ವಿವಿಧ ಮಾಧ್ಯಮಗಳ ಸಂಪಾದಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ತಡೆಯಾಜ್ಞೆ ಎದುರಾಗದಿದ್ದರೆ ಈ ಎಲ್ಲಾ ಮೂಲಸೌಕರ್ಯ ಯೋಜನೆಗಳು ನಿಗದಿತ ವೇಳಾಪಟ್ಟಿಯಂತೆ ಕಾರ್ಯರೂಪಕ್ಕೆ ಬರಲಿವೆ ಎಂದು ಹೇಳಿದರು.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಈ ಯೋಜನೆಗಳು ಅತ್ಯಗತ್ಯವಾಗಿವೆ ಎಂದ ಅವರು, ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ₹26,000 ಕೋಟಿ ಸಾಲ ಪಡೆದು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಟನಲ್ ರಸ್ತೆ ಯೋಜನೆಗೆ ಲಾಲ್‌ಬಾಗ್ ಬಳಿ ಎಕ್ಸಿಟ್ ನೀಡುವ ಪ್ರಸ್ತಾಪದ ಬಗ್ಗೆ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಭೂಸ್ವಾಧೀನ ಪ್ರಕ್ರಿಯೆಯ ವೆಚ್ಚ ಮತ್ತು ಸವಾಲುಗಳನ್ನು ಉಲ್ಲೇಖಿಸಿದ ಅವರು, ಪ್ರತಿ ಚದರ ಅಡಿಗೆ ₹40,000 ದಿಂದ ₹50,000 ಇರುವ ಜಾಗದಲ್ಲಿ ಕಟ್ಟಡಗಳನ್ನು ತೆರವುಗೊಳಿಸಿ ಪರಿಹಾರ ನೀಡುವುದು ದುಬಾರಿಯಾಗುವುದರಿಂದ ಟನಲ್ ರಸ್ತೆಯೇ ಸೂಕ್ತ ಪರ್ಯಾಯವಾಗಿದೆ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ ವಿಪಕ್ಷಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಸಾರ್ವಜನಿಕ ಸಾರಿಗೆ ಬಳಕೆಯ ಕುರಿತ ಹೇಳಿಕೆಗಳನ್ನು ತರಾಟೆಗೆ ತೆಗೆದುಕೊಂಡರು. ಮುಂಬೈನಲ್ಲಿ ಏಳು ಟನಲ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ನಾವು ₹4,000 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿ ಯೋಜನೆಗೆ ಮುಂದಾದಾಗ ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಾ. ಶಿವರಾಮ ಕಾರಂತ ಬಡಾವಣೆ ಉದಾಹರಣೆ ನೀಡಿದ ಅವರು, ನ್ಯಾಯಾಲಯದ ತಡೆಯಾಜ್ಞೆಗಳಿಂದ ಯೋಜನೆಗಳು ವಿಳಂಬವಾಗಿ ಹೂಡಿಕೆ ವೆಚ್ಚ ಹೆಚ್ಚಾಗುತ್ತದೆ ಮತ್ತು ಸಾರ್ವಜನಿಕರಿಗೆ ನಿವೇಶನಗಳ ದರ ದುಬಾರಿಯಾಗುತ್ತದೆ ಎಂದು ವಿವರಿಸಿದರು.
ತಮಿಳುನಾಡು ನಡುವಿನ ನೀರಿನ ವಿವಾದದ ಕುರಿತು ಮಾತನಾಡಿದ ಅವರು, ಎರಡೂ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು. ತಮಿಳುನಾಡಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರು ಬಿಡುವ ಸಲುವಾಗಿಯೇ ಜಲಾಶಯ ನಿರ್ಮಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದ ತಕ್ಷಣವೇ ಒಂದು ವರ್ಷದೊಳಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು. ಅಲ್ಲದೆ, ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಯೋಜನಾಬದ್ಧ ಅಭಿವೃದ್ಧಿಗಾಗಿ ನಗರ ಯೋಜನೆ ರೂಪಿಸುವ ಹಂತದಲ್ಲೇ 'ಮೊಬೈಲಿಟಿ ಗ್ರಿಡ್'ಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.