ಬೆಂಗಳೂರು: ಸಂಸ್ಕರಣೆ ಮಾಡದ ತ್ಯಾಜ್ಯ ನೀರನ್ನು ಚರಂಡಿ ಹಾಗೂ ನದಿಗಳಿಗೆ ಹರಿಸುವ ಕೈಗಾರಿಕೆಗಳಿಗೆ ನೋಟಿಸ್ ನೀಡಿ, ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಬೆಂಗಳೂರು ಜಲಮಂಡಳಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ವಿಶೇಷವಾಗಿ ಬಣ್ಣದ (ಡೈಯಿಂಗ್) ಹಾಗೂ ಇತರ ಕೈಗಾರಿಕೆಗಳಿಂದ ಸಂಸ್ಕರಿಸದ ನೀರನ್ನು ನೇರವಾಗಿ ಮೋರಿಗಳಿಗೆ ಬಿಡುತ್ತಿರುವ ಪ್ರಕರಣಗಳ ಪಟ್ಟಿ ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಿಯಮ ಮೀರಿದರೆ ಫ್ಯಾಕ್ಟರಿಗಳನ್ನು ಸಂಪೂರ್ಣವಾಗಿ ಮುಚ್ಚಿಸಲಾಗುವುದು. ರಾಜ್ಯದಾದ್ಯಂತ ನದಿಗಳ ಅಕ್ಕಪಕ್ಕದಲ್ಲಿರುವ ಎಲ್ಲಾ ಕೈಗಾರಿಕೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಈ ಕುರಿತು ಕೆಐಎಡಿಬಿ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪ್ರಸ್ತುತ ಬೆಂಗಳೂರು ನಗರಕ್ಕೆ ಕಾವೇರಿಯಿಂದ 2,835 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಪ್ರತಿದಿನ ಸುಮಾರು 2,580 ಎಂಎಲ್‌ಡಿ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ 1,215 ಎಂಎಲ್‌ಡಿ ನೀರನ್ನು ಮಾತ್ರ ಎಸ್‌ಟಿಪಿಗಳ ಮೂಲಕ ಸಂಸ್ಕರಿಸಲಾಗುತ್ತಿದ್ದು, ಉಳಿದ ಸುಮಾರು 1,100 ಎಂಎಲ್‌ಡಿ ನೀರು ಸಂಸ್ಕರಣೆಯಿಲ್ಲದೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಎಸ್‌ಟಿಪಿಗಳನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಲಾಗಿದೆ.
ಬೆಂಗಳೂರಿನಿಂದ ಸಂಸ್ಕರಿಸದ ನೀರು ಹರಿದು ಬರುತ್ತಿದೆ ಎಂದು ತಮಿಳುನಾಡು ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ದೂರು ನೀಡಿರುವ ಹಿನ್ನೆಲೆಯಲ್ಲಿ ಜಲ ಸಂಸ್ಕರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮುಂದಾಗಿದೆ. ಪ್ರಸ್ತುತ 1,147 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, 51 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಗಳನ್ನು ಡಿಸೆಂಬರ್ 2026ರೊಳಗೆ, 413 ಎಂಎಲ್‌ಡಿ ಸಾಮರ್ಥ್ಯದ ಯೋಜನೆಗಳನ್ನು ಡಿಸೆಂಬರ್ 2027ರೊಳಗೆ, 148 ಎಂಎಲ್‌ಡಿ ಸಾಮರ್ಥ್ಯವನ್ನು ಡಿಸೆಂಬರ್ 2028ರೊಳಗೆ ಹಾಗೂ ಉಳಿದ 535 ಎಂಎಲ್‌ಡಿ ಸಾಮರ್ಥ್ಯದ ಕಾಮಗಾರಿಗಳನ್ನು ಡಿಸೆಂಬರ್ 2029ರ ವೇಳೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.