image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳಷ್ಟೇ ಗಾಯನ: ಕೇಂದ್ರಕ್ಕೆ ಸೆಡ್ಡು ಹೊಡೆದು ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳಷ್ಟೇ ಗಾಯನ: ಕೇಂದ್ರಕ್ಕೆ ಸೆಡ್ಡು ಹೊಡೆದು ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ತದ್ವಿರುದ್ಧವಾಗಿ ರಾಜ್ಯದ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರವೇ ಹಾಡಲು ಅಥವಾ ನುಡಿಸಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಗೀತೆಯ ಸಂಪೂರ್ಣ 6 ಚರಣಗಳನ್ನು ಹಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ, 1937ರ ಕಾಂಗ್ರೆಸ್‌ ನಿರ್ಣಯದಂತೆ ಪ್ರಮುಖ 2 ಚರಣಗಳ ಗಾಯನಕ್ಕೆ ಸೀಮಿತಗೊಳಿಸಿ ಹೊಸ ನಿಯಮ ಜಾರಿಗೆ ತಂದಿದೆ.

ಸಚಿವ ಸಂಪುಟದ ತೀರ್ಮಾನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (DPAR) ಈ ಸಂಬಂಧ ನೂತನ ಆದೇಶ ಹೊರಡಿಸಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ದೇಶವಾಸಿಗಳಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ‘ವಂದೇ ಮಾತರಂ’ ಗೀತೆಯು ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ಸ್ಮರಿಸಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪರಿಶೀಲಿಸಲಾಗಿದ್ದರೂ, ರಾಜ್ಯ ಸರ್ಕಾರದ ವಿವಿಧ ಸಮಾರಂಭಗಳ ಸ್ವರೂಪ, ಸಮಯದ ಉಳಿತಾಯ, ಏಕರೂಪತೆ ಹಾಗೂ ಸೂಕ್ತ ಗೌರವ ಮತ್ತು ಶಿಷ್ಟಾಚಾರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಲಾಗಿದೆ.

ಈ ಹೊಸ ನಿಯಮದನ್ವಯ ಮಾನ್ಯ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಭಾಗವಹಿಸುವ ಪ್ರಮುಖ ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಉಳಿದೆಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರವೇ ನುಡಿಸಲು ಹಾಗೂ ಹಾಡಲು ನಿರ್ದೇಶನ ನೀಡಲಾಗಿದೆ.

Category
ಕರಾವಳಿ ತರಂಗಿಣಿ