ಬೆಂಗಳೂರು : ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ 'ನಮ್ಮ ಮೆಟ್ರೋ' ಬ್ಲೂ ಲೈನ್ ಮಾರ್ಗದ ಕಾಮಗಾರಿಗೆ ಪ್ರಮುಖ ತಾಂತ್ರಿಕ ಮುನ್ನಡೆ ಸಿಕ್ಕಿದೆ. ಯೋಜನೆಯ ಫೇಸ್ 2ಎ ಮತ್ತು ಫೇಸ್ 2ಬಿ ಅಡಿಯಲ್ಲಿ ಮೆಟ್ರೋ ಟ್ರ್ಯಾಕ್ (ಹಳಿ) ಅಳವಡಿಸಲು ಕೇಂದ್ರ ರೈಲ್ವೆ ಮಂಡಳಿಯು ಅಧಿಕೃತ ಅನುಮೋದನೆ ನೀಡಿದ್ದು, ಯೋಜನೆಯ ಕೆಲಸಗಳು ಮತ್ತಷ್ಟು ಚುರುಕುಗೊಳ್ಳಲು ಹಾದಿ ಸುಗಮವಾಗಿದೆ.
ಬಿಎಂಆರ್‌ಸಿಎಲ್ (BMRCL) ಈ ಸಂಬಂಧ ಜುಲೈ 2 ರಂದು ಆರ್‌ಡಿಎಸ್‌ಒ (RDSO) ಆನ್‌ಲೈನ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳು ಹಾಗೂ ಅನುಸರಣೆ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿತ್ತು. ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್ ಜೊತೆ ಸಮಾಲೋಚನೆ ನಡೆಸಿದ ಬಳಿಕ ಪರಿಶೀಲಿಸಿದ ರೈಲ್ವೆ ಮಂಡಳಿಯು ಇದೀಗ ಅನುಮೋದಿತ ಟ್ರ್ಯಾಕ್ ರಚನೆಯ ಪ್ರತಿಯನ್ನು ಬಿಎಂಆರ್‌ಸಿಎಲ್‌ಗೆ ಕಳುಹಿಸಿಕೊಟ್ಟಿದೆ.
ಈ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೆಟ್ರೋ ಕೊಂಡಿಯಾಗಿದೆ. ಫೇಸ್ 2ಎ (ಸಿಲ್ಕ್ ಬೋರ್ಡ್ - ಕೆ.ಆರ್.ಪುರ) ಹಾಗೂ ಫೇಸ್ 2ಬಿ (ಕೆ.ಆರ್.ಪುರ - ವಿಮಾನ ನಿಲ್ದಾಣ) ಒಳಗೊಂಡಿರುವ ಈ ಸಂಪೂರ್ಣ ಮಾರ್ಗವು ಒಟ್ಟು ಸುಮಾರು 58 ಕಿ.ಮೀ. ಉದ್ದವನ್ನು ಹೊಂದಿದೆ.
ಬಿಎಂಆರ್‌ಸಿಎಲ್ ಈ ಹಿಂದೆ ಬ್ಲೂ ಲೈನ್‌ನ ಮೊದಲ ಹಂತದ ಸುಮಾರು 19 ಕಿ.ಮೀ ಉದ್ದದ (ಸಿಲ್ಕ್ ಬೋರ್ಡ್ - ಕೆ.ಆರ್.ಪುರ) ಮಾರ್ಗವನ್ನು ತೆರೆಯುವ ಗುರಿಯನ್ನು ಹೊಂದಿತ್ತು. ಆದರೆ ಕೆ.ಆರ್.ಪುರ ಮತ್ತು ಸಿಲ್ಕ್ ಬೋರ್ಡ್ ನಡುವಿನ ಅನೇಕ ಸ್ಥಳಗಳಲ್ಲಿ ಸಿವಿಲ್ ಕಾಮಗಾರಿಗಳು ಹಾಗೂ ಸ್ಟೇಷನ್ ಕೆಲಸಗಳು ಇನ್ನೂ ಬಾಕಿ ಇರುವುದರಿಂದ ಮುಂದಿನ ವರ್ಷದ ಆರಂಭದಲ್ಲೇ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದು ಸಾಧ್ಯವಿಲ್ಲವೆನ್ನಲಾಗಿದೆ. ಹೀಗಾಗಿ ವಾಣಿಜ್ಯ ಸಂಚಾರವು ಮುಂದಿನ ವರ್ಷದ ಮಧ್ಯಭಾಗದವರೆಗೆ ಮುಂದೂಡಲ್ಪಡುವ ಸಾಧ್ಯತೆ ದಟ್ಟವಾಗಿದೆ.
ಟ್ರ್ಯಾಕ್ ಅಳವಡಿಕೆಗೆ ರೈಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿರುವುದು ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ್ದು, ಬಾಕಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ನೆರವಾಗಲಿದೆ. ನಿತ್ಯ ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ಪ್ರಯಾಣಿಕರು ಈ ಬೆಳವಣಿಗೆಗೆ ಹರ್ಷ ವ್ಯಕ್ತಪಡಿಸಿದ್ದು, ವಿಮಾನ ನಿಲ್ದಾಣ ಮಾರ್ಗ ಆದಷ್ಟು ಬೇಗ ಲೋಕಾರ್ಪಣೆಯಾಗಲಿ ಎಂದು ಆಶಿಸಿದ್ದಾರೆ.