image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

‘ಬೆಂಗಳೂರಿನಾಚೆಗೆ’ ಕೈಗಾರಿಕಾ ಅಭಿವೃದ್ಧಿ ಯೋಜನೆಗೆ ಶಿವಮೊಗ್ಗ ನಗರ ಸೇರ್ಪಡೆಗೊಳಿಸಲು ಒತ್ತಾಯ

‘ಬೆಂಗಳೂರಿನಾಚೆಗೆ’ ಕೈಗಾರಿಕಾ ಅಭಿವೃದ್ಧಿ ಯೋಜನೆಗೆ ಶಿವಮೊಗ್ಗ ನಗರ ಸೇರ್ಪಡೆಗೊಳಿಸಲು ಒತ್ತಾಯ

ಶಿವಮೊಗ್ಗ: ರಾಜ್ಯದಲ್ಲಿ ‘ಬೆಂಗಳೂರಿನಾಚೆಗೆ’ (ಬಿಯಾಂಡ್ ಬೆಂಗಳೂರು) ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಗುರುತಿಸಲಾಗುವ ನಗರಗಳ ಪಟ್ಟಿಗೆ ಶಿವಮೊಗ್ಗ ನಗರವನ್ನು ಪ್ರಮುಖವಾಗಿ ಸೇರ್ಪಡೆಗೊಳಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಬೆಂಗಳೂರಿನ ಹೊರಗಿನ ಕೈಗಾರಿಕಾ ಅಭಿವೃದ್ಧಿಗಾಗಿ ಆಯ್ಕೆ ಮಾಡುವ ನಗರಗಳಲ್ಲಿ ಶಿವಮೊಗ್ಗವನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಶಿವಮೊಗ್ಗ ನಗರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಪ್ರಾಥಮಿಕ ಕ್ಲಸ್ಟರ್, ವಿಮಾನ ನಿಲ್ದಾಣ, ಬಲಿಷ್ಠ ತಂತ್ರಜ್ಞಾನ, ಶೈಕ್ಷಣಿಕ ಮೂಲಾಧಾರ ಹಾಗೂ ರೈಲು ಮತ್ತು ರಸ್ತೆ ಲಾಜಿಸ್ಟಿಕ್ಸ್ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದರು.

ಫೌಂಡ್ರಿ ಉದ್ಯಮ, ಆಹಾರ ಸಂಸ್ಕರಣಾ ಘಟಕ, ಶಿಮೂಲ್, ಜವಳಿ ಮತ್ತು ಎಂಜಿನಿಯರಿಂಗ್ ಉತ್ಪಾದನಾ ಘಟಕಗಳಲ್ಲಿ ಶಿವಮೊಗ್ಗ ಹೆಚ್ಚು ಪರಿಣತಿ ಹೊಂದಿದ್ದು, ಪ್ರಮುಖ ಉತ್ಪಾದನಾ ಕೇಂದ್ರವಾಗಿದೆ. ವಿಶ್ವದರ್ಜೆಯ ಮೂಲಸೌಕರ್ಯಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ಶಿವಮೊಗ್ಗದಂತಹ ದ್ವಿತೀಯ ಮತ್ತು ತೃತೀಯ ಹಂತದ ನಗರಗಳಿಗೂ ವಿಸ್ತರಣೆಯಾಗಬೇಕು. ಇದು ಕೃಷಿ ಆಧಾರಿತ ಬೆಳೆಗಳ ಜತೆಗೆ ಕೈಗಾರಿಕಾ ಆಧಾರಿತ ಉದಯೋನ್ಮುಖ ಕ್ಲಸ್ಟರ್ ಆಗಿ ಬೆಳೆದು, ದೇಶೀಯ ಹಾಗೂ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ನೆರವಾಗಲಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಹಾಗೂ ಶಿವಮೊಗ್ಗವನ್ನು ಡಿಜಿಟಲ್ ಶಕ್ತಿ ಕೇಂದ್ರ ಮತ್ತು ಐಟಿ ಸೇವೆಗಳ ರಫ್ತುದಾರನನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್, ಕಾರ್ಯದರ್ಶಿ ಎ. ಎಂ. ಸುರೇಶ್, ಸಹಕಾರ್ಯದರ್ಶಿ ಕೆ. ಎಸ್. ಸುಕುಮಾರ್, ಖಜಾಂಚಿ ಆರ್. ಮನೋಹರ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಎಲ್. ಚಂದ್ರಶೇಖರ್ ಸೇರಿದಂತೆ ವಿವಿಧ ಕೈಗಾರಿಕಾ ಮತ್ತು ವರ್ತಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ