image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕ್ಯಾಶ್-ಕ್ಯಾಸ್ಟ್ ಪ್ರಜಾಪ್ರಭುತ್ವವನ್ನು ನಿಯಂತ್ರಿಸಬಾರದು: ಕುಡತಿನಿಯಲ್ಲಿ ಡಾ. ಸಿ.ಟಿ. ರವಿ ಆಕ್ರೋಶ

ಕ್ಯಾಶ್-ಕ್ಯಾಸ್ಟ್ ಪ್ರಜಾಪ್ರಭುತ್ವವನ್ನು ನಿಯಂತ್ರಿಸಬಾರದು: ಕುಡತಿನಿಯಲ್ಲಿ ಡಾ. ಸಿ.ಟಿ. ರವಿ ಆಕ್ರೋಶ

ಕುಡತಿನಿ: ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡದೆ ದೇಶದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಪ್ರಸ್ತುತ ರಾಜಕೀಯದಲ್ಲಿ 'ಕ್ಯಾಶ್ ಮತ್ತು ಕ್ಯಾಸ್ಟ್' (ಹಣ ಹಾಗೂ ಜಾತಿ) ಪ್ರಜಾಪ್ರಭುತ್ವವನ್ನು ನಿರ್ದೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ನೈಜ ಪ್ರಜಾಪ್ರಭುತ್ವದ ಆಶಯವನ್ನೇ ದುರ್ಬಲಗೊಳಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಮಾಜಿ ಸಚಿವ ಡಾ. ಸಿ.ಟಿ. ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ಕುಡತಿನಿಯಲ್ಲಿ 'ಬಳ್ಳಾರಿ ಚಲೋ' ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಯಾವುದೇ ರಾಜಕೀಯ ಪಕ್ಷ ಸಮರ್ಥಿಸಿಕೊಳ್ಳಬಾರದು ಮತ್ತು ಭ್ರಷ್ಟರು ಯಾವ ಪಕ್ಷದಲ್ಲಿದ್ದರೂ ಭ್ರಷ್ಟರೇ ಎಂದು ಪ್ರತಿಪಾದಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ಚರಮಸೀಮೆಗೆ ತಲುಪಿವೆ ಎಂದು ವಾಗ್ದಾಳಿ ನಡೆಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಡವರ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿರುವುದು ಸರ್ಕಾರದ ಅಹಂಕಾರದ ಮನೋಭಾವಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಇತ್ತೀಚಿನ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿಗಳು ನಿಖರ ಮೂಲ ಮಾಹಿತಿ ಮತ್ತು ಅಕ್ರಮ ಹಣದ ವಹಿವಾಟಿನ ಆಧಾರದ ಮೇಲೆಯೇ ನಡೆದಿವೆ ಎಂದ ಅವರು, ಕೇವಲ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವುದಷ್ಟೇ ಸಾಲದು, ಸರ್ಕಾರಕ್ಕೆ ಧೈರ್ಯವಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ತಕ್ಷಣವೇ ಚುನಾವಣೆಗೆ ಬರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

ಇದೇ ವೇಳೆ ಸ್ಥಳೀಯ ರೈತರ ಬೇಡಿಕೆಗಳನ್ನು ಬೆಂಬಲಿಸಿದ ಡಾ. ರವಿ, ವಶಪಡಿಸಿಕೊಂಡ ಭೂಮಿಯಲ್ಲಿ ತಕ್ಷಣ ಕಾರ್ಖಾನೆ ಆರಂಭಿಸಬೇಕು, ಇಲ್ಲವಾದರೆ ರೈತರಿಗೆ ಭೂಮಿ ವಾಪಸ್ ನೀಡಬೇಕು ಅಥವಾ ಪ್ರಸ್ತುತ ಮಾರುಕಟ್ಟೆ ದರದಂತೆ ಸೂಕ್ತ ಪರಿಹಾರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ರೈತರ ಈ ನ್ಯಾಯಯುತ ಮನವಿಯನ್ನು ಮುಂಬರುವ ಸದನದಲ್ಲಿ ಗಂಭೀರವಾಗಿ ಚರ್ಚಿಸಿ ಅವರ ಧ್ವನಿಯಾಗುವುದಾಗಿ ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ