image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿಗೆ ಭಾರಿ ಬೇಡಿಕೆ: 28 ದಿನಗಳಲ್ಲಿ 10ನೇ ಮುದ್ರಣ ದಾಖಲೆ

'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿಗೆ ಭಾರಿ ಬೇಡಿಕೆ: 28 ದಿನಗಳಲ್ಲಿ 10ನೇ ಮುದ್ರಣ ದಾಖಲೆ

ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್‌.ಆರ್‌. ರಮೇಶ್ ಅವರು ರಚಿಸಿದ 'ಲೀಲಮ್ಮ ನಿನ್ನ ಗಂಡ ಯಾರಮ್ಮ?' ಕೃತಿಯು ಪ್ರಥಮ ಮುದ್ರಣ ಬಿಡುಗಡೆಯಾದ ಕೇವಲ 28 ದಿನಗಳ ಅಲ್ಪಾವಧಿಯಲ್ಲಿಯೇ 10ನೇ ಮುದ್ರಣವನ್ನು ಕಾಣುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಸಿದೆ.

ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕೃತಿಯ 10ನೇ ಮುದ್ರಣವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಲೇಖಕ ಎನ್‌.ಆರ್. ರಮೇಶ್‌, ತಮ್ಮ ಇಡೀ ಬದುಕನ್ನು ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಸೇವೆಗೆ ಸಮರ್ಪಣೆ ಮಾಡಿದ್ದ ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಏಳಿಗೆ ಹಾಗೂ ಜನಪ್ರಿಯತೆಯನ್ನು ಸಹಿಸದೆ, ಅವರ ಚಾರಿತ್ರ್ಯವಧೆ ಮಾಡುವ ಏಕೈಕ ದುರುದ್ದೇಶದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿವಾದ ಮತ್ತು ಗೊಂದಲಗಳನ್ನು ಸೃಷ್ಟಿಸಿದ್ದರು ಎಂದು ಹೇಳಿದರು.

ಈ ಎಲ್ಲಾ ಗೊಂದಲಗಳಿಗೆ ಅಧಿಕೃತ ಸರ್ಕಾರಿ ದಾಖಲೆಗಳ ಸಹಿತ ತೆರೆ ಎಳೆಯಬೇಕೆಂಬ ಸದುದ್ದೇಶದಿಂದ ಈ ಕೃತಿಯನ್ನು ರಚಿಸಲಾಗಿದೆ. ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಮತ್ತು ನಟ ವಿನೋದ್ ರಾಜ್ ಅವರ ಸ್ವತ್ತುಗಳಿಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಪ್ರಕಟಿಸಲಾಗಿದೆ. ಪ್ರಸ್ತುತ ಪುಸ್ತಕವು 11 ಮತ್ತು 12ನೇ ಮುದ್ರಣದ ದಿಕ್ಕಿನಲ್ಲಿ ಮುನ್ನಡೆದಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಗಡಿ ರಸ್ತೆ ಹಾಗೂ ಕೆ.ಆರ್. ಪುರಂ ಭಾಗದ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸ್ಥಳದಲ್ಲೇ 10ನೇ ಮುದ್ರಣದ ಎಲ್ಲಾ ಪ್ರತಿಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಉಮೇಶ್ ಹಾಗೂ ಡಾ.ರಾಜ್ ಕುಮಾರ್ ಸೇನೆಯ ತ್ಯಾಗರಾಜ್ ಹಾಜರಿದ್ದರು.

Category
ಕರಾವಳಿ ತರಂಗಿಣಿ