image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 19 ಬಾಲ ಕಾರ್ಮಿಕರ ರಕ್ಷಣೆ: ನಾಲ್ವರು ಅಂಗಡಿ ಮಾಲೀಕರ ಬಂಧನ

ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 19 ಬಾಲ ಕಾರ್ಮಿಕರ ರಕ್ಷಣೆ: ನಾಲ್ವರು ಅಂಗಡಿ ಮಾಲೀಕರ ಬಂಧನ

ಬೆಂಗಳೂರು: ನಗರದ ಯಶವಂತಪುರ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಹೊರರಾಜ್ಯ ಹಾಗೂ ಸ್ಥಳೀಯ ಮೂಲದ 19 ಬಾಲ ಕಾರ್ಮಿಕರನ್ನು ನಗರದ ಉತ್ತರ ವಿಭಾಗದ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಇಂದು ಬೆಳಿಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಕುಂದುಕೊರತೆಗಳನ್ನು ಆಲಿಸಿದ್ದರು. ಈ ವೇಳೆ ಮಾರುಕಟ್ಟೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕಠಿಣ ಹಾಗೂ ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ ಸಕ್ರಿಯಗೊಂಡ ಉತ್ತರ ವಿಭಾಗದ ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿ ಮಾರುಕಟ್ಟೆಯಾದ್ಯಂತ ಸುದೀರ್ಘ ಪರಿಶೀಲನೆ ನಡೆಸಿದರು. ಈ ಕಾರ್ಯಾಚರಣೆಯ ವೇಳೆ ಕರ್ನಾಟಕ ಸೇರಿದಂತೆ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮೂಲದ ಒಟ್ಟು 19 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಾಲ ಕಾರ್ಮಿಕರನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಅಂಗಡಿ ಮಾಲೀಕರ ವಿರುದ್ಧ 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನಾಲ್ವರು ಮಾಲೀಕರನ್ನು ಬಂಧಿಸಲಾಗಿದೆ.

ಇದಲ್ಲದೆ, ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಬದಿ ಹಾಗೂ ಬೀದಿಬದಿ ಅಂಗಡಿಗಳಲ್ಲಿ ದುಡಿಯುತ್ತಿದ್ದ ಮತ್ತೂ 10 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯವನ್ನು ಕಾಯುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡ ಈ ತಕ್ಷಣದ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Category
ಕರಾವಳಿ ತರಂಗಿಣಿ