image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜನಪರ ಹೋರಾಟ ಹತ್ತಿಕ್ಕಲು ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಿಲ್ಲ: ಬಳ್ಳಾರಿಯಲ್ಲಿ ಡಾ. ಸಿ.ಟಿ. ರವಿ ವಾಗ್ದಾಳಿ

ಜನಪರ ಹೋರಾಟ ಹತ್ತಿಕ್ಕಲು ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಿಲ್ಲ: ಬಳ್ಳಾರಿಯಲ್ಲಿ ಡಾ. ಸಿ.ಟಿ. ರವಿ ವಾಗ್ದಾಳಿ

ಬಳ್ಳಾರಿ: ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ರಾಜ್ಯದಾದ್ಯಂತ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಜನರ ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರದ ಕೈಯಿಂದ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದ್ದಾರೆ. ಹಳೆ ದರೋಜಿಯಲ್ಲಿ ಪಾದಯಾತ್ರೆ ನಡೆಸುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಅಧಿಕಾರ ನೀಡಿರುವುದು ಇದೇ ಜನಸಾಮಾನ್ಯರು. ತಮ್ಮ ಹೋರಾಟವನ್ನು ಹತ್ತಿಕ್ಕಲು ಮುಂದಾದರೆ ಸರ್ಕಾರದ ‘ಪವರ್ ಕಟ್’ ಮಾಡುವ ಸಾಮರ್ಥ್ಯವನ್ನೂ ಜನರು ಹೊಂದಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರದಲ್ಲಿರುವವರು ಅಧಿಕಾರದ ದರ್ಪ ಪ್ರದರ್ಶಿಸಬಾರದು ಎಂದ ಸಿ.ಟಿ. ರವಿ, ಹಣ ಮತ್ತು ಅಧಿಕಾರದ ಬಲ ಶಾಶ್ವತವಲ್ಲ, ಕೇವಲ ಜನಬಲವೇ ಶಾಶ್ವತ ಎಂದು ಪ್ರತಿಪಾದಿಸಿದರು. ಬಳ್ಳಾರಿಯಲ್ಲಿ ಬಿಜೆಪಿ ಬಹಿರಂಗ ಸಮಾವೇಶ ನಡೆಸಲು ಮುನ್ಸಿಪಲ್ ಮೈದಾನಕ್ಕೆ ಅನುಮತಿ ನಿರಾಕರಿಸುವ ಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಇದೇ ಮೈದಾನದಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಸಂವಿಧಾನಕ್ಕಿಂತ ಮೇಲಿದ್ದಾರೆಯೇ, ಜನರಿಗಾಗಿ ಹೋರಾಡುತ್ತಿರುವ ಬಿಜೆಪಿಗೆ ಅನುಮತಿ ನಿರಾಕರಿಸುವುದೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಎಷ್ಟೇ ಅಡೆತಡೆ ಒಡ್ಡಿದರೂ ಬಿಜೆಪಿ ಜಗ್ಗುವುದಿಲ್ಲ ಮತ್ತು ಬಳ್ಳಾರಿಗೆ ತೆರಳಿ ಹೋರಾಟ ನಡೆಸಿಯೇ ತೀರುತ್ತದೆ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ, ಕೆಪಿಎಸ್‌ಸಿ ಹಗರಣ ಹಾಗೂ ಕಸ್ತೂರಿರಂಗನ್ ವರದಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಸಲು ಕನಿಷ್ಠ 10 ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಆಗ್ರಹಿಸಿದರು. ಬರ ಘೋಷಣೆ ಮಾಡಿದ ಬಳಿಕ ಸರ್ಕಾರ ಕೈಗೊಂಡ ಪರಿಹಾರ ಕಾಮಗಾರಿಗಳ ಬಗ್ಗೆ ಪ್ರಶ್ನಿಸಿದ ಅವರು, ಬರ ವೀಕ್ಷಣೆಗೆ ಹೆಲಿಕಾಪ್ಟರ್ ಬಳಸಿರುವುದನ್ನೇ ಸರ್ಕಾರದ ದೊಡ್ಡ ಸಾಧನೆಯಂತೆ ಬಿಂಬಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಜೊತೆಗೆ, ಕೆಪಿಎಸ್‌ಸಿ ಹಗರಣ ಕರ್ನಾಟಕಕ್ಕೆ ಕಪ್ಪುಚುಕ್ಕೆ ಎಂದ ಅವರು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಹಾಗೂ ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎನ್ನುವುದು ಬಿಜೆಪಿಯ ಬದ್ಧತೆಯಾಗಿದೆ ಎಂದರು.

ಬಿಜೆಪಿ ಪಾದಯಾತ್ರೆಗೆ ಸಿಗುತ್ತಿರುವ ಜನಬೆಂಬಲದಿಂದ ಕಾಂಗ್ರೆಸ್ ಸರ್ಕಾರ ಆತಂಕಗೊಂಡಿದೆ. ಈ ಕಾರಣದಿಂದಲೇ ವಿವಿಧ ಇಲಾಖೆಯನ್ನು ಬಳಸಿಕೊಂಡು ಪಾದಯಾತ್ರೆ ಯಶಸ್ವಿಯಾಗದಂತೆ ತಡೆಯಲು ಯತ್ನಿಸಲಾಗುತ್ತಿದೆ ಎಂದು ರವಿ ಆರೋಪಿಸಿದರು. ಇದು ರೈತರು, ಮಹಿಳೆಯರು, ದಲಿತರು ಹಾಗೂ ಜನಸಾಮಾನ್ಯರ ಪರವಾದ ಹೋರಾಟವಾಗಿದ್ದು, ಯಾವುದೇ ಶಕ್ತಿಯಿಂದಲೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಣದ ಅಕ್ರಮದ ಕುರಿತು ಉತ್ತರಿಸಿದ ಅವರು, ಈ ಹಣವನ್ನು ಯಾರು ಪಡೆದುಕೊಂಡರು ಮತ್ತು ಅಧಿಕಾರಿಯ ಮರಣಪತ್ರದಲ್ಲಿ ಉಲ್ಲೇಖವಾಗಿರುವ ಸಚಿವರ ಮೌಖಿಕ ಸೂಚನೆಯ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಅಧಿಕಾರ ದುರುಪಯೋಗಪಡಿಸಿಕೊಂಡರೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

Category
ಕರಾವಳಿ ತರಂಗಿಣಿ