ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಒಕ್ಕೊರ್ಮೆಯ ಪ್ರಪ್ರಥಮ ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಪೆಮ್ಮಂಡ ಕುಟುಂಬಸ್ಥರ ಬಲ್ಯಮನೆಯಲ್ಲಿ ನಡೆಸಲು ಉದ್ದೇಶಿಸಿದ್ದು ಇದರ ಅಂಗವಾಗಿ ಪೂರ್ವಭಾವಿ ಸಭೆಯನ್ನು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪೆಮ್ಮಂಡ ಕೆ. ಪೊನ್ನಪ್ಪನವರ ಉತ್ಸುಕತೆ ಹಾಗೂ ಕುಟುಂಬದ ಅಧ್ಯಕ್ಷರಾದ ಪೆಮ್ಮಂಡ ಪಿ. ಅರುಣರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯರನ್ನು ಪೆಮ್ಮಂಡ ಕುಟುಂಬದ ಬಲ್ಯಮನೆಗೆ ಗೌರವ ಪೂರಕವಾಗಿ ಆಹ್ವಾನಿಸಿದ ಪೆಮ್ಮಂಡ ಕುಟುಂಬಸ್ಥರು ‘ಒಕ್ಕೊರ್ಮೆ’ಗೆ ಸಕಲ ಸಹಮತವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಒಕ್ಕೊರ್ಮೆ ನಡೆಸುವ ಉದ್ದೇಶ, ಪ್ರತಿಯೊಂದು ಕುಟುಂಬದ ಸದಸ್ಯರನ್ನು ಸಾಹಿತ್ಯ- ಸಂಸ್ಕೃತಿಯ ನೆರಳಿಗೆ ತರುವುದು. ಅಲ್ಲಲ್ಲಿ ಚದುರಿ ಹೋಗಿರುವ ಕುಟುಂಬಸ್ಥರನ್ನು ಒಗ್ಗೂಡಿಸುವುದು ಹಾಗೂ ಕುಟುಂಬದ ಹಿರಿಮೆ- ಗರಿಮೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಂಪರಾಗತವಾಗುವಂತೆ ನೋಡಿಕೊಳ್ಳುವುದು. ಕುಟುಂಬದ ಜಾನಪದ ಕಲಾಕೃತಿಗಳು, ವಸ್ತುಗಳು ಬಲ್ಯಮನೆಗಳಲ್ಲಿ ಕಾಪಾಡಿಕೊಂಡು ಹೋಗುವುದು. ಪೆಮ್ಮಂಡ ಕುಟುಂಬದ ಹಿರಿಮೆಯನ್ನು ಸಾಕ್ಷಿಯಾಗುವಂತೆ ನಡೆಸಲಾಗುವ ‘ಒಕ್ಕೊರ್ಮೆ’ಗೆ ಜಿಲ್ಲೆಯ ಶಾಸಕರುಗಳು, ಊರಿನ ಗಣ್ಯರು, ತವರು ಮನೆಯ ಹಿರಿಯರು, ಗಣ್ಯರನ್ನು ಸ್ವಾಗತಿಸಲಾಗುವುದು. ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕುಟುಂಬದಲ್ಲಿ ಹೆಸರು ಮಾಡಿರುವ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಕುಟುಂಬದ ಹಾಗೂ ಒಕ್ಕೊರ್ಮೆಗೆ ಆಗಮಿಸುವ ಸರ್ವರಿಗೆ ಹಲವು ಸ್ಪರ್ಧಾಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದರು. ಈ ವೇಳೆ ಪೆಮ್ಮಂಡ ಒಕ್ಕ ಪರಿಚಯವನ್ನು ಮಾಡುವಂತೆ ನಿರ್ಧರಿಸಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಎಸ್. ಉತ್ತಪ್ಪ ಹಾಗೂ ಪೆಮ್ಮಂಡ ಕುಟುಂಬಸ್ಥರಾದ ಕಾಶಿ, ಗಿಣಿ ನಾಚಪ್ಪ, ಕಾರ್ಯಪ್ಪ, ಪಿ. ಪಿ. ಪ್ರಸಾದ್, ಪಿ. ಬಿ. ಗಿರೀಶ್, ಪಿ. ಪಿ. ಬೋಪಣ್ಣ, ಪಿ. ಕೆ. ಸೋಮಯ್ಯ, ಪಿ. ಎನ್. ಸೋಮಯ್ಯ, ಪಿ. ಎಸ್. ಬೋಪಯ್ಯ, ಪಿ. ಎಸ್. ಅಪ್ಪಯ್ಯ, ಪಿ. ಎ. ಪೊನ್ನಪ್ಪ, ನಿತಿನ್ ಸಂತೋಷ್, ಪಿ. ಪಿ. ಅರುಣ, ಪಿ. ಎ. ಕಂಠೇಶ್, ಪಿ. ಜಿ. ದೇಚಮ್ಮ, ಪಿ. ಎನ್. ಅನಿತ, ವಿಪ್ರ ನೀಲಮ್ಮ ಪಿ. ಎ. ಉಷಾ, ರೋಹಿಣಿ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.