ಕಂಪ್ಲಿ : ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದ್ದಾರೆ.
ಕಂಪ್ಲಿಯಿಂದ ಮೆಟ್ರಿಗೆ ತೆರಳುವ ಮಾರ್ಗಮಧ್ಯೆ ಪಾದಯಾತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಪ್ರವಾಹದೋಪಾದಿಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದೇ ಸರ್ಕಾರದ ವಿರುದ್ಧ ರೂಪುಗೊಳ್ಳುತ್ತಿರುವ ಜನಾಭಿಪ್ರಾಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಈ ಪಾದಯಾತ್ರೆಯು ಆಡಳಿತಾರೂಢ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಆದರೆ ಭ್ರಷ್ಟ ಹಾಗೂ ಬಂಡತನದ ಕೂಟವಾಗಿರುವ ಕಾಂಗ್ರೆಸ್ ಸರ್ಕಾರವು ಬೇಗನೆ ಬದಲಾಗುವ ಲಕ್ಷಣಗಳಿಲ್ಲ. ಅವರು ನಾಟಕವಾಡಬಹುದು ಅಥವಾ ವೇಷ ಮರೆಸಿಕೊಳ್ಳಬಹುದು, ಆದರೆ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರಸ್ತುತ ಆಡಳಿತ ಯಂತ್ರ ಸಂಪೂರ್ಣ ಕಸಿಯಲಾಗಿದ್ದು, ಪ್ರತಿಯೊಂದು ಕೆಲಸಕ್ಕೂ ಲಂಚದ ದರ ನಿಗದಿಯಾಗಿದೆ ಎಂದು ಆರೋಪಿಸಿದರು. ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಕಡತಗಳು ಮುಂದೆ ಸಾಗುತ್ತಿಲ್ಲ ಹಾಗೂ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಬರುವ ಸಾರ್ವಜನಿಕರನ್ನು ಓಡಿಸುವ ವಾತಾವರಣ ನಿರ್ಮಾಣವಾಗಿದೆ. ಇದು ಪ್ರಜಾಸೇವೆಯಲ್ಲ, ಬದಲಿಗೆ ಭ್ರಷ್ಟಾಚಾರದ ಪರಾಕಾಷ್ಠೆ ಎಂದು ದೂರಿದರು.
ಇದೇ ವೇಳೆ, ಕಸ್ತೂರಿರಂಗನ್ ವರದಿ ಸೇರಿದಂತೆ ರಾಜ್ಯದ ಹಲವು ಪ್ರಮುಖ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ಕಾರ ಕರೆದಿರುವ ವಿಶೇಷ ಅಧಿವೇಶನವನ್ನು ಕೇವಲ ಮೂರು ದಿನಗಳಿಗೆ ಸೀಮಿತಗೊಳಿಸಬಾರದು ಎಂದು ಸಿ.ಟಿ. ರವಿ ಆಗ್ರಹಿಸಿದರು. ಕಸ್ತೂರಿರಂಗನ್ ವರದಿಯ ಸಾಧಕ-ಬಾಧಕಗಳು, ಕೆಪಿಎಸ್‌ಸಿಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ಶಾಸನಸಭೆಯಲ್ಲಿ ಸಮಗ್ರ ಚರ್ಚೆಯಾಗಬೇಕಿದ್ದು, ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವುದು ಮತ್ತು ಶಕ್ತಿಯುತ ಜನಾಭಿಪ್ರಾಯ ರೂಪಿಸುವುದೇ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಪ್ರತಿಪಾದಿಸಿದರು.