image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಹಿಂದ ಅಬ್ಬರ: 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂದು ಘೋಷಣೆ ಕೂಗಿದ ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಹಿಂದ ಅಬ್ಬರ: 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂದು ಘೋಷಣೆ ಕೂಗಿದ ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಜನ ಜಾಗೃತಿ ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸಿದ್ದರಾಮಯ್ಯ ಅವರನ್ನು "ಮುಂದಿನ ಮುಖ್ಯಮಂತ್ರಿ" ಎಂದು ಘೋಷಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, "ನಾನು ರಾಜಕಾರಣಕ್ಕೆ ಬಂದು ಮೂರು ವರ್ಷಗಳಾಗಿದ್ದರೆ, ಸಿದ್ದರಾಮಯ್ಯನವರು ಕಳೆದ 45 ವರ್ಷಗಳಿಂದ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ನನ್ನ ಎದೆಯಲ್ಲಿ ಶ್ರೀರಾಮನೂ ಇದ್ದಾನೆ, ಸಿದ್ದರಾಮಯ್ಯನವರೂ ಇದ್ದಾರೆ" ಎಂದರು. ಸಿದ್ದರಾಮಯ್ಯ ಅವರನ್ನು ಕೇವಲ ಕುರುಬ ಸಮುದಾಯದ ನಾಯಕರನ್ನಾಗಿ ನೋಡದೆ, ಇಡೀ ಅಹಿಂದ ವರ್ಗದ ನಾಯಕ ಎಂದು ಬಣ್ಣಿಸಿದ ಅವರು, ಹಲವರು ಕುರಿ ಕಾಯುವವ ಎಂದು ಟೀಕಿಸಿದರೂ ದಾಖಲೆ ಮಟ್ಟದ ಬಜೆಟ್ ಮಂಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು. ತಮ್ಮ ಭಾಷಣದ ಕೊನೆಯಲ್ಲಿ "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ" ಎಂದು ಎರಡೆರಡು ಬಾರಿ ನುಡಿದು ಸಭಿಕರಲ್ಲಿ ಉತ್ಸಾಹ ತುಂಬಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಸಚಿವ ಸಂತೋಷ್ ಲಾಡ್ ಮಾತನಾಡಿ, ಹಿಂದುಳಿದ ವರ್ಗಗಳ ಹೋರಾಟ ಪ್ರಾರಂಭವಾಗಿ 25 ವರ್ಷಗಳಾಗಿವೆ. ತಮಿಳುನಾಡಿನಲ್ಲಿ ಶೇಕಡಾ 65 ರಷ್ಟು ಮೀಸಲಾತಿ ಇದ್ದು, ದೇಶಾದ್ಯಂತ ಶೇಕಡಾ 45 ರಿಂದ 50 ರಷ್ಟು ಒಬಿಸಿ ಜನಸಂಖ್ಯೆಯಿದೆ. ಎಲ್ಲರಿಗೂ ಸಮಪಾಲು ಮತ್ತು ಸಮಬಾಳು ಸಿಗಬೇಕಾದರೆ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಒಬಿಸಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಗಣತಿಯಿಂದ ಒಬಿಸಿ ಕಾಲಂ ತೆಗೆದುಹಾಕಿರುವುದನ್ನು ಟೀಕಿಸಿದ ಅವರು, ದೇಶದಲ್ಲಿ 60 ಕೋಟಿಗೂ ಹೆಚ್ಚು ಒಬಿಸಿ ಜನರಿದ್ದು, ಸಿದ್ದರಾಮಯ್ಯ ಅವರ ಆಯುಷ್ಯ ಮತ್ತು ಆರೋಗ್ಯ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ 'ಮುಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡಬೇಕು' ಎಂದು ಆಗ್ರಹಿಸುವ ಬ್ಯಾನರ್‌ಗಳನ್ನು ಬೆಂಬಲಿಗರು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವರಾದ ಮಧು ಬಂಗಾರಪ್ಪ, ಅಜಯ್ ಸಿಂಗ್, ಶಾಸಕರಾದ ಬಿ.ಬಿ. ಚಿಮ್ಮನಕಟ್ಟಿ, ಉಮೇಶ್ ಮೇಟಿ, ಬಸವರಾಜ ಶಿವಣ್ಣನವರ್, ಎಂಎಲ್‌ಸಿಗಳಾದ ಗಾಯತ್ರಿ ಶಾಂತೇಗೌಡ ಹಾಗೂ ನಾಗರಾಜ್ ಯಾದವ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ