image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಮ್ಮ ಮಕ್ಕಳು ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗದಾತರಾಗಬೇಕು - ಸಿಎಂ ಡಿ. ಕೆ. ಶಿವಕುಮಾರ್

ನಮ್ಮ ಮಕ್ಕಳು ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗದಾತರಾಗಬೇಕು - ಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿರುವಂತಹ ಪ್ರತಿಭಾವಂತ ಮಾನವ ಸಂಪನ್ಮೂಲ ದೇಶದ ಬೇರಾವ ರಾಜ್ಯಗಳಲ್ಲೂ ಇಲ್ಲ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಕಲಿಯುವ ಮೂಲಕ ಕೇವಲ ಉದ್ಯೋಗಿಗಳಾಗದೆ, ಉದ್ಯೋಗದಾತರಾಗಬೇಕು ಎಂಬುದೇ ಸರ್ಕಾರದ ಆಶಯ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ "ವಿದೇಶದಲ್ಲಿ ಅಧ್ಯಯನ 2026" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಗರೋತ್ತರ ಜ್ಞಾನವನ್ನು ಬೆಸೆಯಲು ಸರ್ಕಾರ ಹೊಸ ಬಾಗಿಲು ತೆರೆದಿದೆ. ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಅತ್ಯುತ್ತಮ ಕೆಲಸ ನಡೆಯುತ್ತಿದ್ದು, ಜ್ಞಾನದ ಮೇಲಿನ ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗಲಿದೆ. ಮಾನವನಿಗೆ ಎಲ್ಲೆಗಳಿರಬಹುದು, ಆದರೆ ಜ್ಞಾನಕ್ಕೆ ಯಾವುದೇ ಎಲ್ಲೆಗಳಿಲ್ಲ. ಜಾಗತಿಕ ಮಟ್ಟದ ಶಿಕ್ಷಣ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಿಷ್ಠರಾಗುತ್ತಾರೆ ಎಂದರು.

ಕಲಿತ ವಿದ್ಯೆಯನ್ನು ದಾಯಾದಿ ಧಕ್ಕಿಸಲಾರ, ಬೆಂಕಿಯಲ್ಲಿ ಸುಡಲಾಗದು, ನೀರಿನಲ್ಲಿ ನೆನೆಯದು ಹಾಗೂ ಯಾರೂ ಕಸಿಯಲು ಸಾಧ್ಯವಿಲ್ಲ ಎಂಬ ಗುರುಗಳ ಮಾತನ್ನು ಸ್ಮರಿಸಿದ ಸಿಎಂ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಜಾಗತಿಕ ಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಬೆಂಗಳೂರು ಜಾಗತಿಕ ನಗರವಾಗಿದ್ದು, ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ 13,940 ವೈದ್ಯರು ಇಲ್ಲಿಂದ ಹೊರಬರುತ್ತಿದ್ದು, ಇಷ್ಟು ಬೃಹತ್ ಪ್ರಮಾಣದ ಮಾನವ ಸಂಪನ್ಮೂಲ ಬೇರೆಲ್ಲೂ ಸಿಗುವುದಿಲ್ಲ ಎಂದು ವಿವರಿಸಿದರು.

ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್ ಅವರಂತಹ ಮಹಾನ್ ನಾಯಕರು ವಿದೇಶದಲ್ಲಿ ಓದಿ ದೇಶವನ್ನು ಮುನ್ನಡೆಸಿದ್ದಾರೆ. ಈ ಬಾರಿಯ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಿದ್ದು, 300ಕ್ಕೂ ಹೆಚ್ಚು ವಿಷಯಗಳಲ್ಲಿ ವ್ಯಾಸಂಗ ಮಾಡಲು ಅವಕಾಶವಿದೆ. ವಿವಿಧ ಇಲಾಖೆಗಳಿಂದ ವಿಶೇಷ ವಿದ್ಯಾರ್ಥಿವೇತನ ಮತ್ತು ಬ್ಯಾಂಕ್‌ಗಳಿಂದ ₹2 ಕೋಟಿ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಒಡಂಬಡಿಕೆ ಸೇರಿದಂತೆ ಒಟ್ಟು 3,145 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದ್ದು, ರಾಜ್ಯದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Category
ಕರಾವಳಿ ತರಂಗಿಣಿ