ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,991 ಸಿಎಆರ್ (CAR) ಮತ್ತು ಡಿಎಆರ್ (DAR) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭಾನುವಾರ ನಡೆಸಿದ ಲಿಖಿತ ಪರೀಕ್ಷೆಯು ರಾಜ್ಯಾದ್ಯಂತ ಅತ್ಯಂತ ಬಿಗಿ ಭದ್ರತೆ ಹಾಗೂ ಶಾಂತಿಯುತ ವಾತಾವರಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಕೇಂದ್ರಗಳನ್ನು ತಲುಪಲು ಬೆಂಗಳೂರು ಸಂಚಾರ ಪೊಲೀಸರು ಸೂಕ್ತ ಸಂಚಾರ ದಟ್ಟಣೆ ನಿರ್ವಹಣೆ ವ್ಯವಸ್ಥೆ ಮಾಡಿದ್ದರು.
ಈ ಬಾರಿಯ ಮಿಕ್ಕುಳಿದ ವೃಂದದ ಪರೀಕ್ಷೆಗಾಗಿ 16 ಜಿಲ್ಲೆಗಳ 309 ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದ 1,42,220 ಅಭ್ಯರ್ಥಿಗಳ ಪೈಕಿ 1,14,079 (ಶೇ. 80) ಮಂದಿ ಹಾಜರಾಗಿದ್ದರು. ಅದೇ ರೀತಿ ಕಲ್ಯಾಣ ಕರ್ನಾಟಕ ವೃಂದದ ನಾಲ್ಕು ಜಿಲ್ಲೆಗಳ 60 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 32,191 ಅಭ್ಯರ್ಥಿಗಳ ಪೈಕಿ 28,849 (ಶೇ. 90) ಮಂದಿ ಹಾಜರಾಗಿದ್ದರು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಬೆಂಗಳೂರಿನ ಕೆಇಎ ಕಚೇರಿಯ ಕಮಾಂಡ್ ಸೆಂಟರ್‌ನಿಂದಲೇ ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್‌ಕಾಸ್ಟಿಂಗ್ ಮೂಲಕ ತೀವ್ರ ನಿಗಾ ವಹಿಸಲಾಗಿತ್ತು. ಪರೀಕ್ಷೆ ಮುಗಿದ ತಕ್ಷಣ ಕೆಇಎ ತಲುಪಿದ ಒಎಂಆರ್ (OMR) ಉತ್ತರ ಪತ್ರಿಕೆಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಅಭ್ಯರ್ಥಿಗಳು ಸೇರಿದಂತೆ ಸಾರ್ವಜನಿಕರು ಯಾರಾದರೂ ಈ ಒಎಂಆರ್ ಪ್ರತಿಗಳನ್ನು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.