ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆಗಳು, ಪೇಪರ್ ಕಪ್‌ಗಳು ಹಾಗೂ ಪೇಪರ್ ಪ್ಲೇಟ್‌ಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರು ಆದೇಶ ಹೊರಡಿಸಿದ್ದಾರೆ. ಈ ನೂತನ ನಿಯಮದಂತೆ ಪೇಪರ್ ಕಪ್‌ಗಳು, ಕಂಟೈನರ್‌ಗಳು, ಅಡಿಕೆ ಹಾಳೆಯ ತಟ್ಟೆಗಳು, ಪೇಪರ್ ಪ್ಲೇಟ್‌ಗಳು ಹಾಗೂ ಕಾಲು, ಅರ್ಧ ಮತ್ತು 1 ಲೀಟರ್ ಸಾಮರ್ಥ್ಯದ ನೀರಿನ ಬಾಟಲಿಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು ವ್ಯಾಪಾರಿಗಳಿಗೆ ಆದೇಶದ ಪ್ರತಿಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಆದರೆ ನಗರಸಭೆಯ ಈ ಏಕಾಏಕಿ ನಿರ್ಧಾರಕ್ಕೆ ಮಡಿಕೇರಿಯ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಣ್ಣಿನಲ್ಲಿ ಸುಲಭವಾಗಿ ಕೊಳೆಯುವ ಹಾಗೂ ಪರಿಸರ ಸ್ನೇಹಿಯಾಗಿರುವ ಅಡಿಕೆ ಎಲೆಗಳ ತಟ್ಟೆಗಳು ಮತ್ತು ಪೇಪರ್ ಕಪ್‌ಗಳ ಮೇಲೆಯೇ ನಿಷೇಧ ಹೇರಿರುವುದಕ್ಕೆ ಅವರು ಆಕ್ರೋಶ ಹೊರಹಾಕಿದ್ದಾರೆ. ದೇವಾಲಯಗಳ ಜಾತ್ರೆ, ಕ್ರೀಡಾಕೂಟ ಹಾಗೂ ಸಾರ್ವಜನಿಕ ಮತ್ತು ಸರ್ಕಾರಿ ಸಮಾರಂಭಗಳಲ್ಲಿ ಇಂತಹ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ ಹಾಗೂ ಬಳಕೆಯ ನಂತರ ಇವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೇಕಲ್, ನಗರಸಭೆ ಆಡಳಿತವು ತನ್ನ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಮಡಿಕೇರಿಗೆ ಹೊರಗಿನಿಂದ ಬರುವ ಜನರು ಯಾವುದೇ ತಡೆಯಿಲ್ಲದೆ ಈ ವಸ್ತುಗಳನ್ನು ತಂದು ತಮ್ಮ ಖಾಸಗಿ ಕಾರ್ಯಕ್ರಮ ಅಥವಾ ಆವರಣದೊಳಗೆ ಬಳಸಬಹುದು. ಇದನ್ನು ತಡೆಯಲು ನಗರಸಭೆಗೆ ಸಾಧ್ಯವಿಲ್ಲ. ಜಿಲ್ಲಾ ಆಡಳಿತದೊಂದಿಗೆ ಸಮಾಲೋಚನೆ ನಡೆಸದೆ ನಗರಸಭೆ ಈ ಕ್ರಮ ಕೈಗೊಂಡಿದೆ. ನಿಷೇಧ ಹೇರುವುದಿದ್ದರೆ ಇಡೀ ಜಿಲ್ಲೆಗೆ ಅನ್ವಯಿಸುವಂತೆ ಮಾಡಬೇಕಿತ್ತು; ಕೇವಲ ಮಡಿಕೇರಿ ನಗರಕ್ಕೆ ಮಾತ್ರ ಸೀಮಿತಗೊಳಿಸಿದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.